• Mon. Apr 29th, 2024

PLACE YOUR AD HERE AT LOWEST PRICE

ಕೋಲಾರ:ಸಹಕಾರ ರಂಗವು ರಾಜಕಾರಣಕ್ಕೆ ದುರ್ಬಳಕೆಯಾಗದೇ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಸಿಗುವಂತಾಗಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.

            ನಗರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಸದಸ್ಯರಿಗೆ ಆಯೋಜಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮನಾತನಾಡುತ್ತಿದ್ದರು.

            ಎಂಪಿಸಿಎಸ್, ಎಸ್‌ಎಫ್‌ಸಿಎಸ್‌ಗಳ ಆಡಳಿತ ಮಂಡಳಿ ಚುನಾವಣೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದು, ಇದು ಸಹಕಾರ ರಂಗದ ಬಹು ದೊಡ್ಡ ಲೋಪವಾಗಿದೆ, ಚುನಾವಣೆ ನಂತರವಾದರೂ ಅಧಿಕಾರ ಪಡೆದವರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವ ಹೊಣೆಗಾರಿಕೆ ಇಲ್ಲವಾಗಿದೆ ಎಂದು ವಿಷಾದಿಸಿದರು.

            ಸಹಕಾರ ರಂಗ ಎಡವತ್ತಿರುವ ಬಗ್ಗೆ ಯಾರು ಅರಿತುಕೊಳ್ಳುತ್ತಿಲ್ಲ, ಈ ಕ್ಷೇತ್ರವನ್ನು ಚುನಾವಣೆ ಸಿಮೀತಗೊಳಿಸಿದ್ದಾರೆ ಗ್ರಾಮೀಣ ರೈತರು,ಮಹಿಳೆಯರು ಬದುಕು ಕಟ್ಟಿಕೊಳ್ಳುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲೂ ರಾಜಕೀಯ ಮಾಡುತ್ತಿರುವುದು ಸಹಕಾರಿ ವ್ಯವಸ್ಥೆಯ ಬಹುದೊಡ್ಡ ಲೋಪ ಎಂದರು.

ಎಲ್ಲಾ ರಂಗಗಳಲ್ಲಿ ಲೋಪಗಳು ಇದ್ದೆ ಇವೆ, ಅದನ್ನು ಮೀರಿ ಕೆಲಸ ಮಾಡಿದಾಗ ಸಾಕಷ್ಟು ಮಂದಿಗೆ ಸೌಲಭ್ಯ ಕಲ್ಪಿಸಲು ಸಾಧ್ಯ. ಹಾಲು ಸಂಘಗಳಿಂದ ಸಾವಿರಾರು ರೈತರು ಬದುಕು ಕಟ್ಟಿಕೊಂಡಿದ್ದಾರೆ, ೧೫ ದಿನಕ್ಕೊಮ್ಮೆ ಬಟವಾಡೆಯಾಗುತ್ತದೆ. ಜಿಲ್ಲೆಯ ಜೀವಾಳವಾಗಿ ಸಹಕಾರಿ ವ್ಯವಸ್ಥೆ ಕೆಲಸ ಮಾಡುತ್ತಿದೆ, ಇದನ್ನು ರಾಜಕೀಯದ ನೆರಳಿನಿಂದ ಹೊರ ತಂದು ಉಳಿಸುವ ಜವಾಬ್ದಾರಿ ಸಹಕಾರಿಗಳಾದ್ದಾಗಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕೋಲಾರ ಜಿಲ್ಲೆಯ ಅಭಿವೃದ್ದಿಯಲ್ಲಿ ಸಹಕಾರ ಸಂಘಗಳ ಪಾತ್ರ’ ವಿಷಯದ ಕುರಿತು ಮಾತನಾಡಿ, ಡಿಸಿಸಿ ಬ್ಯಾಂಕನ್ನು ಬಳಸಿ ಅದನ್ನು ಏಣಿಯಾಗಿಸಿಕೊಂಡು ಬೆಳೆದ ರಾಜಕಾರಣಿಗಳು ತಮ್ಮ ವೈಯಕ್ತಿಕ ದ್ವೇಷ, ಅಸೂಯೆಗಾಗಿ ಬ್ಯಾಂಕ್ ಬಲಿಕೊಡುವ ಕೆಲಸಕ್ಕೆ ಮುಂದಾಗಿದ್ದು, ಅವರಿಗೆ ಇನ್ನಾದರೂ ಜ್ಞಾನೋದಯವಾಗಲಿ ಎಂದು ಆಶಿಸಿದರು.

            ೨೦ ವರ್ಷಗಳ ಕಾಲ ಡಿಸಿಸಿ ಬ್ಯಾಂಕಿಗೆ ಬುಕ್ ಅಡ್ಜೆಸ್ಟ್ಮೆಂಟ್‌ನಿಂದಾಗಿ ಬೀಗ ಹಾಕಲಾಗಿತ್ತು. ಆದರೆ ಬ್ಯಾಲಹಳ್ಳಿ ಗೋವಿಂದಗೌಡರ ಆಡಳಿತ ಮಂಡಳಿ ಪ್ರಯತ್ನ, ವೈಧ್ಯನಾಥನ್ ವರದಿ ಜಾರಿ, ರಾಜ್ಯ ಸರ್ಕಾರ ನೀಡಿದ ೧೦ ಕೋಟಿ ನೆರವಿನಿಂದ ಇಂದು ೧೫೦೦ ಕೋಟಿ ರೂ ಸಾಲ ಜಿಲ್ಲೆಯಲ್ಲಿ ನೀಡಲಾಗಿದೆ, ಲಕ್ಷಾಂತರ ಮಹಿಳೆಯರು, ರೈತರು ಬದುಕು ಕಟ್ಟಿಕೊಳ್ಳುವಂತಾಗಿದ್ದು, ಇದೇ ಸಹಕಾರದ ಶಕ್ತಿ ಎಂದರು.

            ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿ ಎ.ಎಸ್.ನಾಗರಾಜಸ್ವಾಮಿ, ಸಹಕಾರ ಕಾಯ್ದೆಯ ಇತ್ತೀಚಿನ ತಿದ್ದುಪಡಿಗಳ ಮತ್ತು ಪತ್ರಕರ್ತರ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿ, ಸಹಕಾರಿ ಕಾಯಿದೆಗಳ ತಿದ್ದುಪಡಿ, ಚುನಾವಣೆ ವಿಧಾನ, ಸಂಘದ ಸಭೆ ನಡೆಸಲು ಕೋರಂ, ಸರ್ವಸದಸ್ಯರ ಸಭೆಗೆ ಹಾಜರಾತಿ, ಮತ್ತಿತರ ಮಾಹಿತಿ ನೀಡಿ, ಸಹಕಾರ ಸಂಘದ ಸಭೆಗಳಲ್ಲಿ ತಪ್ಪುಗಳನ್ನು ಪ್ರಶ್ನಿಸುವ ಶಕ್ತಿ ನಿರ್ದೇಶಕರು, ಸದಸ್ಯರಿಗೆ ಬಂದಾಗ ಸಹಕಾರ ರಂಗ ಉಳಿಯಲು ಸಾಧ್ಯ ಎಂದರು.

            ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಸಹಕಾರ ಸಂಘಗಳಲ್ಲಿ ಪತ್ರಕರ್ತರ ಹೊಣೆಗಾರಿಕೆ ಕುರಿತು ಮಾತನಾಡಿ, ಪತ್ರಕರ್ತರಿಗೂ ಸಹಕಾರ ಸಂಘಕ್ಕೂ ಅವಿನಾಭಾವ ಸಂಬಂಧವಿದೆ. ಸಹಕಾರಿ ಕಾಯ್ದೆಗಳನ್ನು ಒಳ್ಳೆಯದಕ್ಕೂ, ಕೆಟ್ಟದು ಎರಡಕ್ಕೂ ಬಳಸಿಕೊಳ್ಳಲು ಅವಕಾಶವಿದೆ ಎಂದರು.

            ಕೇಂದ್ರ ಸರ್ಕಾರವು ಇತ್ತೀಚೆಗೆ ಸಹಕಾರ ಕ್ಷೇತ್ರಗಳಲ್ಲಿ ಮೂಗು ತೋರಿಸುವ ಮೂಲಕ ಮಾರಕವಾಗುವ ಆತಂಕವಿದೆ. ಅಕ್ರಮಗಳಿಗೆ ಅಸಹಕಾರ ನೀಡಿ. ಸತ್ಯ ಪ್ರಮಾಣಿಕತೆ ಸಹಕಾರ ನೀಡುವಂತಾಗಬೇಕು, ಏನೇ ಕಾಯ್ದೆಗಳು ಜಾರಿಯಾದರೂ ಸಾಧಕ ಭಾಧಕಗಳನ್ನು ಅವಲೋಕಿಸಿ ಒಳ್ಳೆಯ ಉದ್ದೇಶವನ್ನು ಹೊಂದುವ ಮೂಲಕ ಸಹಕಾರಿ ಕಾಯಿದೆಗಳು ಮತ್ತಷ್ಟು ಸರಳೀಕರಣಗೊಳ್ಳಬೇಕು ಎಂದರು.

            ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಪೆಮ್ಮಶೆಟ್ಟಹಳ್ಳಿ ಎಸ್.ಸುರೇಶ್, ಸಹಕಾರ ಕ್ಷೇತ್ರದ ವತಿಯಿಂದ ತರಭೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮುಂದುವರೆಸಿ ಕೊಂಡು ಬರಲಾಗುತ್ತಿದೆ. ಸಹಕಾರ ಕ್ಷೇತ್ರವು ಸಂಕಷ್ಟದಲ್ಲಿ ಇರುವವರಿಗೆ ಸಹಕಾರ ನೀಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಸ್ವಾವಲಂಭಿಗಳಾಗಿ ರೂಪಿಸುವುದು ಮುಖ್ಯ ಧ್ಯೇಯವಾಗಿದೆ ಎಂದರು.

ಅಣ್ಣೆಹಳ್ಳಿ ಸಹಕಾರ ಸಂಸ್ಥೆಯಿಂದ ಆಯ್ಕೆಯಾದ ಕೆ.ಶ್ರೀನಿವಾಸಗೌಡರು ಅಂತರಾಷ್ಟ್ರೀಯ ಮಟ್ಟದ ಇಪ್ಕೋ, ಕ್ರಿಪ್ಕೋ ಸಂಸ್ಥೆಗಳ ಅಧ್ಯಕ್ಷರಾದರು ಎಂಬುವುದರ ಸಹಕಾರ ಕ್ಷೇತ್ರಕ್ಕೆ ಇರುವಂತ ಶಕ್ತಿಯನ್ನು ಅರಿಯಬಹುದಾಗಿದೆ ಎಂದು ತಿಳಿಸಿದರು,

            ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ನಿರ್ದೇಶಕರಾದ ಅ.ಮು.ಲಕ್ಕ್ಷ್ಮೀನಾರಾಯಣ, ಮೂರಾಂಡಹಳ್ಳಿ ಡಾ.ಇ.ಗೋಪಾಲಪ್ಪ, ಡಿ.ಆರ್.ರಾಮಚಂದೇಗೌಡ, ಎನ್. ಶಂಕರನಾರಾಯಣಗೌಡ, ಪಿ.ಎಂ.ವೆಂಕಟೇಶ್, ಪಿ. ಪಾಪಣ್ಣ, ಪಿ.ಎನ್. ಕೃಷ್ಣಾರೆಡ್ಡಿ, ಕೆ.ಎಂ. ವೆಂಕಟೇಶಪ್ಪ, ಷೇಕ್ ಮಹಮದ್, ಉಪಸ್ಥಿತರಿದ್ದರು.

ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಕೆ.ಎಂ. ಸ್ವಾಗತಿಸಿ ನಿರೂಪಿಸಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ವಂದಿಸಿದರು. ಪತ್ರಕರ್ತರ ಸಹಕಾರ ಸಂಘದ ಸಿಇಒ ಗಂಗಾಧರ್, ಒಕ್ಕೂಟದ ವ್ಯವಸ್ಥಾಪಕಿ ಎನ್. ಲಕ್ಷ್ಮಿದೇವಿ ರವಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!