• Wed. May 8th, 2024

PLACE YOUR AD HERE AT LOWEST PRICE

ಕೋಲಾರ: ಮುಂದಿನ ಐದು ವರ್ಷಗಳಲ್ಲಿ ಇಡೀ ವಿಶ್ವವೇ ತಿರುಗಿ ನೋಡುವಂತ ಸಾಂಸ್ಕೃತಿಕ ಪರಂಪರೆಯ ಕಾರಿಡಾರ್ ಮಕ್ಕಳ ನಳಂದ ನೀಲನಕ್ಷೆ ತಯಾರಾಗುತ್ತಿದೆ, ಇದನ್ನು ಸಾಕಾರಗೊಳಿಸಲು ಎಲ್ಲರನ್ನು ಆಹ್ವಾನಿಸುತ್ತಿದ್ದೇನೆ ಎಂದು ಸಾಹಿತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ನಗರದ ಟಿ.ಚನ್ನಯ್ಯರಂಗಮಂದಿರದ ಸಭಾಂಗಣದಲ್ಲಿ ಶುಕ್ರವಾರ ತಮಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸಿಕ್ಕಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ದಿಢೀರ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಕೋಲಾರ ಜಿಲ್ಲೆಯಲ್ಲಿ ರಂಗಾಯಣದಂತ ಕೇಂದ್ರ ಇಲ್ಲವೆಂಬ ಕಾರಣದಿಂದ ಆದಿಮ ಸಾಂಸ್ಕೃತಿಕ ಕೇಂದ್ರವನ್ನು ಹುಟ್ಟು ಹಾಕಿದ್ದು, ಕಲಾಶಾಲೆಯ ಕೊರತೆಯನ್ನು ನೀಗಲು ಬುಡ್ಡಿದೀಪ ಸಾಂಸ್ಕೃತಿಕ ಕೇಂದ್ರವನ್ನು ಆರಂಭಿಸಲಾಗಿದೆ. ಈ ಕೇಂದ್ರವನ್ನು ಅಮ್ಮನ ಪ್ರಯೋಗಶಾಲೆಯನ್ನಾಗಿ  ಮಾರ್ಪಡಿಸಲಾಗುತ್ತಿದ್ದು, ಹಲವರು ಕೈಜೋಡಿಸಿದ್ದಾರೆಂದು ವಿವರಿಸಿದರು.

ಕೋಲಾರದ ನೆಲದಲ್ಲಿ ಅತ್ಯುತ್ತಮ ಕೃತಿಗಳುಳ್ಳ ಗ್ರಂಥಾಲಯದ ಕೊರತೆ ಎದ್ದು ಕಾಣಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಟೆಂಟ್ ಶಾಲೆಯನ್ನು ಆರಂಭಿಸಲಾಗಿದೆ. ಈ ಟೆಂಟ್ ಶಾಲೆಯ ಮುಖ್ಯ ಉದ್ದೇಶ ಕಳೆದ ೨೫ ವರ್ಷಗಳಲ್ಲಿ ಅಂಬೇಡ್ಕರ್ ಕುರಿತು ಪ್ರಕಟವಾಗಿರುವ ೧ ಸಾವಿರ ಕೃತಿಗಳನ್ನು ಸಂಗ್ರಹಿಸಿ, ಅವುಗಳನ್ನು ಪ್ರತಿ ಗ್ರಾಮದಲ್ಲಿ ಪ್ರದರ್ಶಿಸುವುದು, ಯುವ ಪೀಳಿಗೆಗೆ ಪರಿಯಿಸಿ ಓದುವಂತೆ ಪ್ರೇರೇಪಿಸುವುದಾಗಿದೆ.

ಈ ಆಂದೋಲನವು ಫೆ.೧೫ ರಿಂದ ಏಪ್ರಿಲ್ ೧೪ ರವರೆವಿಗೂ ನಡೆಯಲಿದೆ, ಆಂದೋಲನದ ಭಾಗವಾಗಿ ಏಳು ಮಂದಿ ನಟರು ವಿವಿಧ ನಾಟಕಗಳ ಅಭ್ಯಾಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ದಮನಿತರ ವಿಮೋಚನೆಗಾಗಿ ಬಿಡುಗಡೆಯ ನೀಲನಕ್ಷೆಯನ್ನು ತಾವು ರೂಪಿಸಿದ್ದು, ಒಂದು ಸಮರ್ಥ ಪೀಳಿಗೆಯನ್ನು ರೂಪಿಸಲು ಇದು ಸಹಕಾರಿಯಾಗಿದೆ. ಇದಕ್ಕಾಗಿ ಸಂಸ್ಕೃತಿ ಯಾನ ೧ ಆದಿಮದಲ್ಲಿ ಜರುಗಿದೆ. ಸಂಸ್ಕೃತಿಯಾನ ೨ ಮಂಡ್ಯದಲ್ಲಿ ನಡೆಯಲಿದೆ. ಸಂಸ್ಕೃತಿಯಾನ ೩ ಕ್ಕಾಗಿ ಬುಡ್ಡಿದೀಪ ಕೇಂದ್ರವನ್ನು ಅಮ್ಮನ ಪ್ರಯೋಗಾಲಯವನ್ನಾಗಿ ರೂಪಿಸಲಾಗುತ್ತಿದೆ. ಇದಕ್ಕಾಗಿ ೧೫ ಮಂದಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಕನ್ನಡ ಸಂಸ್ಕೃತಿ ಇಲಾಖೆಯು ತಮಗೆ ಜಾತಿಗೆ ಮಿತಿಗೊಳ್ಳದ ಸಂಗೊಳ್ಳಿ ರಾಯಣ್ಣ ಔನತ್ಯದ ಪ್ರಶಸ್ತಿಯನ್ನು ತಮಗೆ ನೀಡಿರುವುದು ಸಮಾಧಾನ ತಂದಿದೆ. ತಮ್ಮ ಮುಂದಿನ ಎಲ್ಲಾ ಕನಸುಗಳನ್ನು ನನಸು ಮಾಡುವುದಕ್ಕೆ ಕೈಜೋಡಿಸುವುದೇ ನನಗೆ ನೀವು ನೀಡುವ ಸನ್ಮಾನ ಅಭಿನಂದನೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ಈ ಸಂದರ್ಭದಲ್ಲಿ ಕೆ.ಸಿ.ರಾಜಣ್ಣ, ಅನಂತಕೀರ್ತಿ, ಗಾಂಧಿನಗರ ರೇಣು, ಸಿಎಂಆರ್ ಶ್ರೀನಾಥ, ಬಂಗಾರಪೇಟೆ ಕನ್ನಡ ಸಂಘದ ಪಲ್ಲವಿ ಮಣಿ, ರಾಜ್‌ಕುಮಾರ್, ಚಂದ್ರಮೌಳಿ, ದಲಿತ ನಾರಾಯಣಸ್ವಾಮಿ, ಚೇತನಬಾಬು, ಅಂಬೇಡ್ಕರ್ ನಗರ ಮುನಿಯಪ್ಪ, ನರಸಾಪುರ ನಾರಾಯಣಸ್ವಾಮಿ, ಕಲ್ಪಮಂಜಲಿ ಶಿವಣ್ಣ, ಪಾರೇಹೊಸಹಳ್ಳಿ ಮುನಿಯಪ್ಪ, ಸಿ.ವಿ.ನಾಗರಾಜ್, ಆನಂದ್ ಜೀವಿ ಸೇರಿದಂತೆ ವಿವಿಧ ಸಂಘಟನೆಗಳ ಅನೇಕ ಮಂದಿ ಕೋಟಿಗಾನಹಳ್ಳಿ ರಾಮಣ್ಣರನ್ನು ಅಭಿನಂದಿಸಿದರು. ರೇಣುಕಾ ಕಾರ್ಯಕ್ರಮ ನಿರೂಪಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!