• Sun. Apr 28th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಸುಭದ್ರ ಬಲಿಷ್ಠ ರಾಜ್ಯ ನಿರ್ಮಾಣವಾಗಬೇಕಾದರೆ ಅಲ್ಲಿ ಮುಖ್ಯವಾಗಿ ಆರೋಗ್ಯವಂತ ಮಾನವ ಸಂಪನ್ಮೂಲ ಅತ್ಯಗತ್ಯ, ಈ ಹಿನ್ನಲೆಯಲ್ಲಿ ರಾಜ್ಯದ್ಯಂತ ಸುಸಜ್ಜಿತವಾದ ಆಸ್ಪತ್ರೆಗಳ ಸೌಲಭ್ಯಗಳನ್ನು ಒದಗಿಸಿಕೊಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ಮತ್ತು 12 ಹಾಸಿಗೆಗಳ ಕೊಠಡಿ ಹಾಗೂ ಡಯಾಲಿಸಿಸ್ ಕೇಂದ್ರವನ್ನು  ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಜನರ ಆರೋಗ್ಯವನ್ನು ರಕ್ಷಿಸಿಕೊಡುವ ನಿಟ್ಟಿನಲ್ಲಿ ಬದ್ಧವಾಗಿದೆ. ಈ ಹಿನ್ನಲೆಯಲ್ಲಿ ಸುಸಜ್ಜಿತವಾದ ಆಸ್ಪತ್ರೆಗಳ ನಿರ್ಮಾಣ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದರ ಮುಂದುವರೆದ ಭಾಗವಾಗಿ ಬಂಗಾರಪೇಟೆಯಲ್ಲಿ 12 ಹಾಸಿಗೆಗಳ ಒಳಗೊಂಡ ಕಟ್ಟಡ  ಮತ್ತು ಐಸೋಲೇಶನ್ ವಾರ್ಡನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮತ್ತು ರೇಡಿಯೋಲಜಿಸ್ಟ್ ನುರಿತ ವೈದ್ಯರ ಕೊರತೆ ಇದ್ದು ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಅತಿ ಶೀಘ್ರದಲ್ಲಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ನೇಮಕ ಮಾಡಲಾಗುವುದು, ಒಟ್ಟಾರೆಯಾಗಿ ಆರೋಗ್ಯವಂತ ಸದೃಢ ಮಾನವ ಸಂಪನ್ಮೂಲ ಕೃಢೀಕರಣದ ಮೂಲಕ ರಾಜ್ಯವನ್ನು ಅನಾರೋಗ್ಯ ಮುಕ್ತವನ್ನಾಗಿಸುವ ಗುರಿ ನಮ್ಮದಾಗಿದೆ ಎಂದರು.

ಎಸ್ ಎನ್ ನಾರಾಯಣಸ್ವಾಮಿ ರವರು ಶಾಸಕರಾದ ನಂತರ ಬಂಗಾರಪೇಟೆ ತಾಲೂಕು ಅಭಿವೃದ್ಧಿಯ ಪಥದತ್ತ ಸಾಗಿದೆ ಶಾಸಕರು ಪದೇಪದೇ ಸರ್ಕಾರಿ ಆಸ್ಪತ್ರೆಯ ಬಗ್ಗೆ ಚರ್ಚೆ ನಡೆಸುತ್ತಿದ್ದರು, ಈ ಹಿನ್ನಲೆಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ ಆಸ್ಪತ್ರೆ ನಿರ್ಮಾಣವಾಗಿದೆ, ಇದರೊಟ್ಟಿಗೆ ಇಂದು ಐಸೋಲೇಶನ್ ವಾರ್ಡ್ ಲೋಕಾರ್ಪಣೆಯಾಗಿದ್ದು ಶಾಸಕರ ಸೇವಾ ಮನೋಭಾವದ ಬದ್ಧತಗೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್ ಎನ್ ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಹುದಿನದ ಬೇಡಿಕೆಯಾಗಿದ್ದ ಡಯಾಲಿಸಿಸ್ ಸೆಂಟರ್ ಮತ್ತು ಐಸೋಲೇಶನ್ ವಾರ್ಡ್ ಗಳನ್ನು ಒದಗಿಸಿಕೊಟ್ಟು ಸಹಕರಿಸಿದಂತ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು ತಿಳಿಸುವುದಾಗಿ ಹೇಳಿದರು.

ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದ್ದು ನುರಿತ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶಿಷ್ಟವಾಗಿ 1050 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುವ ಸ್ವಂತ ಸಾಮರ್ಥ್ಯದ ಘಟಕವನ್ನು  ಹೊಂದಿದ್ದು ಪ್ರತಿನಿತ್ಯ1500ಕ್ಕೂ ಹೆಚ್ಚು ಹೊರರೋಗಿಗಳು ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟೇ ಬಾರಿ ಮನವಿ ಮಾಡಿದರೂ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಈ ಬಾರಿ ನಮ್ಮದೇ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ತಸಿಲ್ದಾರ್ ರಶ್ಮಿ, ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು, ತಾಲೂಕು ವೈದ್ಯಾಧಿಕಾರಿ ಪ್ರಿಯದರ್ಶಿನಿ, ಡಾ.ಎ ಎಂ ಭಾರತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ಸಿ ಓ ಮೀನಾಕ್ಷಿ, ಡಿ ವೈ ಎಸ್ ಪಿ ಪಾಂಡುರಂಗ, ಪೋಲಿಸ್ ನಿರೀಕ್ಷಕ ನಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾರ್ಥಸಾರಥಿ ಮತ್ತು ಚಂದು, ಬೂದಿಕೋಟೆ ನಾಗರಾಜು, ಮುಖಂಡರಾದ ಗೋಪಾಲ ರಡ್ಡಿ, ಅಣ್ಣಾದೊರೈ, ಪುರಸಭಾ ಸದಸ್ಯರಾದ ಎಂ.ಮಂಜುನಾಥ್, ಎಸ್ ವೆಂಕಟೇಶ್, ಗೋವಿಂದ, ಶಾರದಾ ವಿವೇಕಾನಂದ, ಶಫಿ, ಶಂಶುದ್ದೀನ್ ಬಾಬು, ಮುಖಂಡ ಅ.ನಾ.ಹರೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಂ. ಹರೀಶ್, ಇತರರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!