• Sat. Apr 27th, 2024

PLACE YOUR AD HERE AT LOWEST PRICE

5,8,9ನೇ ತರಗತಿಗಳ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ಕುರಿತು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ನ್ಯಾಯಮೂರ್ತಿ ರವಿ ಹೊಸಮನಿ ನೇತೃತ್ವದ ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಮಹತ್ವದ ಆದೇಶವನ್ನು ನೀಡಿದ್ದು, ರಾಜ್ಯ ಪಠ್ಯಕ್ರಮದ ಶಾಲೆಗಳ 5,8,9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದ ರಾಜ್ಯ ಸರ್ಕಾರದ ಸುತ್ತೋಲೆಯನ್ನು ರದ್ದುಪಡಿಸಿದೆ.

ರಾಜ್ಯ ಸರಕಾರದ ಸುತ್ತೋಲೆಯನ್ನು ಪ್ರಶ್ನಿಸಿ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್‌ ಈ ತೀರ್ಪನ್ನು ನೀಡಿದೆ. ಹೈಕೋರ್ಟ್‌ನ ಈ ಆದೇಶದಿಂದ ಇದೇ ಮಾರ್ಚ್ 9 ರಿಂದ 11 ರವರೆಗೆ ನಿಗದಿಯಾಗಿದ್ದ ಬೋರ್ಡ್ ಪರೀಕ್ಷೆಗಳು ರದ್ದಾದಂತಾಗಿದೆ.

ರಾಜ್ಯ ಶಿಕ್ಷಣ ಇಲಾಖೆ ಕಾಯ್ದೆಯಡಿ 2023ರ ಅಕ್ಟೋಬರ್ 6 ಮತ್ತು 9ರಂದು ಎರಡು ಸುತ್ತೋಲೆಗಳನ್ನು ಹೊರಡಿಸಿ ಬೋರ್ಡ್ ಮಟ್ಟದ ಪರೀಕ್ಷೆ ನಡೆಸುವುದಕ್ಕೆ ತೀರ್ಮಾನಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರ‌ ಸಂಘ, ಶಿಕ್ಷಣ ಇಲಾಖೆ ಸುತ್ತೋಲೆ ಕೇವಲ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. ಇದು ಪಠ್ಯಕ್ರಮದ ಭಾಗವಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದಿದೆ.

ಬೋರ್ಡ್ ಪರೀಕ್ಷೆಗೆ ಕಲಿಕಾ ಚೇತರಿಕೆ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಸಿದ್ಧಪಡಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಖಾಸಗಿ ಶಾಲೆಗಳ ಪಠ್ಯಕ್ರಮ ಹಾಗೂ ಸರ್ಕಾರಿ ಶಾಲೆಗಳ ಪಠ್ಯಕ್ರಮ ವಿಭಿನ್ನವಾಗಿವೆ. ಕಲಿಕಾ ಚೇತರಿಕೆ ಪಠ್ಯಕ್ರಮದ ಪ್ರಶ್ನೆಗಳಿಗೆ ಖಾಸಗಿ ಶಾಲಾ ಮಕ್ಕಳು ಉತ್ತರಿಸುವುದು ಸುಲಭವಲ್ಲ. ಆದ್ದರಿಂದ ಎಲ್ಲಾ ಮಕ್ಕಳಿಗೂ ಅನ್ವಯವಾಗುವಂತೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು.

ಸರ್ಕಾರದ ಪರ ವಕೀಲರು, ಕಲಿಕಾ ಚೇತರಿಕೆ ಕೂಡಾ ಪಠ್ಯಕ್ರಮದ ಭಾಗವಾಗಿದೆ. ಸಾಮಾನ್ಯ ಪಠ್ಯಕ್ರಮದಿಂದಲೇ ಕಲಿಕಾ ಚೇತರಿಗೆ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಮಕ್ಕಳ ಬುದ್ಧಿಮತ್ತೆಯನ್ನು ಸಕಾರಾತ್ಮಕವಾಗಿ ವೃದ್ಧಿಸುವ ನಿಟ್ಟಿನಲ್ಲಿ ಇದನ್ನು ರೂಪಿಸಲಾಗಿದೆ. ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಲ್ಲ. ಬೋರ್ಡ್ ಪರೀಕ್ಷೆಗೆ ಕಲಿಕಾ ಚೇತರಿಕೆ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ನೀಡುವ ನಿರ್ಧಾರ ಸರಿಯಿದೆ. ಬೋರ್ಡ್‌ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಕೋರ್ಟ್‌ನಲ್ಲಿ ಸರಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!