PLACE YOUR AD HERE AT LOWEST PRICE
ಬಂಗಾರಪೇಟೆ:ಸಂವಿಧಾನದ ತಿದ್ದುಪಡಿ ಕುರಿತು ಮಾತನಾಡಿದ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಆಗ್ರಹಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿನಿತ್ಯ ಸಂವಿಧಾನ ತಿದ್ದುಪಡಿ ಮಾಡುತ್ತೇವೆ. ಬದಲಾವಣೆ ಮಾಡಲೆಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಬಾರಿ 400 ಸ್ಥಾನ ಬಿಜೆಪಿಗೆ ನೀಡಿದರೆ ಖಂಡಿತ ಬದಲಾವಣೆ ಮಾಡುತ್ತೇವೆಂದು ಪ್ರಚೋದನಾಕಾರಿ, ದೇಶದ್ರೋಹ ಹೇಳಿಕೆ ನೀಡುತ್ತಿರುವ ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಕೂಡಲೇ ಪಕ್ಷದಿಂದ ಉಚ್ಚಾಟಿಸಿ, ಕಾನೂನು ಕ್ರಮ ಕೈಗೊಳ್ಳಬೇಕು.
ಅನಂತ್ ಕುಮಾರ್ ಹೆಗ್ಡೆ ಅನೇಕಬಾರಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದ್ದು ಈ ಬಾರಿ ಮತ್ತೊಮ್ಮೆ ಪುನರಾವರ್ತಿಸಿದ್ದಾರೆ. ಈಗ ಇರುವ ಸಂವಿಧಾನ ಹಿಂದೂ ವಿರೋಧಿ, ನಾವು ಬದಲಾಯಿಸುತ್ತೇವೆ ಎಂದು ಭಾರತ ದೇಶದಲ್ಲಿದ್ದುಕೊಂಡೇ ನಮ್ಮ ದೇಶದ ಸಂವಿಧಾನದ ವಿರುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ವಿರುದ್ಧದ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯಿಂದ ಭಾರತೀಯ ದೇಶಪ್ರೇಮಿಗಳ, ದಲಿತ, ಅಲ್ಪಸಂಖ್ಯಾತ ಬಂಧುಗಳ ಭಾವನೆಗೆ ಧಕ್ಕೆ ತಂದಿದೆ. ಇದು ದೇಶದ ಶಾಂತಿ, ಸಾಮರಸ್ಯವನ್ನು ಕೆಡಿಸುವ ಪ್ರಯತ್ನವಾಗಿದೆ. ನಾವು ಸಂವಿಧಾನ ಬದಲಿಸಲು ಬಿಡುವುದಿಲ್ಲ, ಈತನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಂಸದರ ಹೇಳಿಕೆಗಳಿಂದ ಸಂವಿಧಾನವು ಅಪಾಯದಲ್ಲಿದೆ ಎನಿಸುತ್ತಿದೆ. ಇಂತಹ ದೇಶದ್ರೋಹ, ಪ್ರಜೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ವರಿಷ್ಠರು ಏಕೆ ಇವರ ವಿರುದ್ದ ಕ್ರಮ ಗೊಳ್ಳುತ್ತಿಲ್ಲವೆಂದು ಪ್ರಶ್ನಿಸಿದರು. ಈ ಕೂಡಲೇ ಅನಂತ ಕುಮಾರ್ ಹೆಗಡೆಯನ್ನು ಪಕ್ಷದಿಂದ ಉಚ್ಚಾಟಿಸಿ, ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಬೇಕು. ರಾಜ್ಯದಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಸಮಾಜ ಸೇನೆಯ ಪದಾಧಿಕಾರಿಗಳಾದ ಅಯ್ಯಪ್ಪ, ಮಂಜುನಾಥ್ ಇದ್ದರು.