• Sat. Apr 27th, 2024

PLACE YOUR AD HERE AT LOWEST PRICE

ಕೋಲಾರ: ಅರಣ್ಯ ಒತ್ತುವರಿ ಆರೋಪದಡಿಯಲ್ಲಿ ಸಾಗುವಳಿ ಚೀಟಿ ಹೊಂದಿದ್ದ ರೈತರ ಸಾವಿರಾರು ಎಕರೆ ಮಾವಿನ ತೋಪುಗಳನ್ನು ಸೇರಿದಂತೆ ತರಕಾರಿ ಬೆಳೆಗಳನ್ನು ತೆರವುಗೊಳಿಸಿದ ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲು ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಸಂಯುಕ್ತ ಹೋರಾಟ ಸಮಿತಿ ಹಾಗೂ ರೈತರು ಜಿಲ್ಲಾಧಿಕಾರಿ ಕಛೇರಿ ಸಮೀಪ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಹೈಕೋರ್ಟ್ ವಕೀಲ ಶಿವಪ್ರಕಾಶ್ ಮಾತನಾಡಿ ರೈತರಿಗೆ ಸರಕಾರವೇ ಕಾನೂನು ಪ್ರಕಾರ ಹಕ್ಕು ಪತ್ರಗಳನ್ನು ನೀಡಿದ್ದರೂ ಸಹ ಅವರ ಜಮೀನುಗಳನ್ನು ಅಕ್ರಮವಾಗಿ ದೌರ್ಜನ್ಯದಿಂದ ರೈತರಿಂದ ಸ್ವಾಧೀನಕ್ಕೆ ಪಡೆದು, ಕೋಟ್ಯಂತರ ರೂಪಾಯಿಗಳ ಮೌಲ್ಯದ ಮಾವಿನ ಮರಗಳು ತರಕಾರಿ ಬೆಳೆಗಳನ್ನು ನಾಶಪಡಿಸಿಕೊಂಡಿದ್ದಾರೆ ಕಾನೂನು ಪ್ರಕಾರ ಲಕ್ಷಾಂತರ ಮರಗಳನ್ನು ಕಡಿದು ಹಾಕಿದ ಅರಣ್ಯ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಇದು ಒಂದು ರೀತಿಯಲ್ಲಿ ಜಿಲ್ಲೆಯಲ್ಲಿ ಸರ್ವಾಧಿಕಾರಿ ದೋರಣೆಯ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಜನರ ರೈತರ ಬಗ್ಗೆ ಇಚ್ಛಾಶಕ್ತಿಯಿಲ್ಲವಾಗಿದೆ ಜಿಲ್ಲೆಯ ಚರಿತ್ರೆ ತಿಳಿದು ಗೌರವ ಕೊಡುವುದನ್ನು ಅಧಿಕಾರಿಗಳು ಕಲಿಯಬೇಕು ಮೊದಲೇ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಪೀಡಿತ ಪ್ರದೇಶವಾಗಿದ್ದು ಅತಿ ಕಡಿಮೆ ನೀರು ಬಳಕೆ ಮಾಡಿ ಹಣ್ಣು ತರಕಾರಿಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ರೈತರ ಜಮೀನುಗಳಿಗೆ ನುಗ್ಗಿ ಏಕಾಏಕಿ ದೌರ್ಜನ್ಯದಿಂದ ಜಮೀನನ್ನು ವಶಪಡಿಸಿಕೊಂಡಿದ್ದಾರೆ ಇದು ರೈತರಿಗೆ ಹಾಗೂ ಪ್ರಕೃತಿಗೆ ಮಾಡಿದ ದ್ರೋಹ ಎಂದರು.

ಈ ಸಂದರ್ಭದಲ್ಲಿ ಕೆ.ಪಿ.ಆರ್.ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ ಮಾತನಾಡಿ ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ಹಾಗೂ ಅರಣ್ಯ ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಸುಮಾರು ೧೩೦೦ ಎಕರೆ ಪ್ರದೇಶದಲ್ಲಿ ಸುಮಾರು ೮೦ ಸಾವಿರಕ್ಕೂ ಅಧಿಕ ಮಾವಿನ ಮರಗಳ ಮಾರಣ ಹೋಮ ಮಾಡಿದ್ದಾರೆ, ೧೯೬೦ರಲ್ಲಿ ಭೂ ಮಂಜೂರಾತಿ ಮಾಡಿರುವುದು ದಾಖಲೆಗಳಲ್ಲಿದೆ, ಸಾಗುವಳಿ ಪತ್ರ ಹಾಗೂ ಹಕ್ಕು ಪತ್ರ ನೀಡಿದ್ದಾರೆ ಆದರೂ ಇಂತಹ ಘಟನೆಗಳು ನಡೆದಿವೆ ಎಂದರೆ ಜಿಲ್ಲಾಧಿಕಾರಿಯಾಗಿ ಏನು ಮಾಡುತ್ತಾ ಇದ್ದಾರೆ ಎಂದು ಪ್ರಶ್ನೆ ಮಾಡಿದರು.

ಕೋಲಾರ ಜಿಲ್ಲೆಯಲ್ಲಿ ಇತಿಹಾಸ ಪುಟಗಳಲ್ಲಿ ರೈತರಿಗೆ ಮಾಡಿದ ದೊಡ್ಡ ದ್ರೋಹದ ಘಟನೆಯಾಗಿದೆ ಡಿಎಫ್ಒ ಏಡುಕೊಂಡಲು ಅವರು ಸಂವಿಧಾನ ಬದ್ದ ಕಾನೂನುಗಳನ್ನು ಧಿಕ್ಕರಿಸಿ ಮರಗಳನ್ನು ನಾಶಪಡಿಸಿದ್ದಾರೆ. ಇವರಿಗೆ ಅರಣ್ಯ ಅಧಿಕಾರಿಯಾಗಿ ಮುಂದುವರೆಯುವಂತಹ ಯಾವುದೇ ನೈತಿಕತೆ ಇಲ್ಲ. ಕೂಡಲೇ ಸರ್ಕಾರವು ಬೇರೆ ಜಿಲ್ಲೆಗೆ ವರ್ಗಾಯಿಸಬೇಕು ಮತ್ತು ಇವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಹರಿಹರ ಪ್ರಿಯಾ, ರೈತ ಮುಖಂಡರಾದ ಅಬ್ಬಣಿ ಶಿವಪ್ಪ, ಟಿ.ಎಂ ವೆಂಕಟೇಶ್, ಗಣೇಶ್ ಗೌಡ, ಕೂಟೇರಿ ನಾಗರಾಜ್, ಪಿ.ಆರ್ ನವೀನ್ ಕುಮಾರ್, ಗೋಪಾಲ್, ವಿಜಯಕೃಷ್ಣ, ನಾರಾಯಣರೆಡ್ಡಿ, ಅಲಹಳ್ಳಿ ವೆಂಕಟೇಶ್, ಆನಂದ್ ಕುಮಾರ್, ಸೇರಿದಂತೆ ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿ ಕಛೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದ ಪ್ರತಿಭಟನಾಕಾರರಿಗೆ ಜಿಲ್ಲಾಡಳಿತದಿಂದ ಅನುಮತಿ ನಿರಾಕರಿಸಲಾಗಿತ್ತು ನಂತರ ಜಿಲ್ಲಾಧಿಕಾರಿ ಕಛೇರಿ ಸಮೀಪದಲ್ಲೇ ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರು ತೀರ್ಮಾನಿಸಿದರು ಮನವಿ ಪತ್ರ ಸ್ವೀಕರಿಸಲು ಜಿಲ್ಲಾಧಿಕಾರಿ ಪರವಾಗಿ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ ಆಗಮಿಸಿದ್ದರು ಆದರೆ ಸ್ಥಳಕ್ಕೆ ಜಿಲ್ಲಾಧಿಕಾರಿಯೇ ಬರಬೇಕು ಎಂದು ಪಟ್ಟು ಹಿಡಿದು ಒತ್ತಾಯಿಸಿದಾಗ ಎಸಿ ಅಲ್ಲಿಂದ ನಿರ್ಗಮಿಸಿದರು ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಡಿಸಿ‌ ಅಕ್ರಂ ಪಾಷ ಅರಣ್ಯ ಮತ್ತು ಕಂದಾಯ ಇಲಾಖೆಯ ನೇತೃತ್ವದಲ್ಲಿ ಜಂಟಿ ಸರ್ವೆ ನಡೆಸಲಾಗುತ್ತದೆ ಅಲ್ಲಿ ತನಕ ಒತ್ತುವರಿ ಮಾಡುವುದಿಲ್ಲ ಎಂದು ತಿಳಿಸಿದರು

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!