• Sat. Sep 7th, 2024

PLACE YOUR AD HERE AT LOWEST PRICE

ಪಂಚೆ ತೊಟ್ಟ ರೈತನಿಗೆ ಪ್ರವೇಶ ನಿರಾಕರಣೆ ಮಾಡಿ ಅವಮಾನಿಸಿದ ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ಅನ್ನು ಏಳು ದಿನಗಳ ಕಾಲ ಮುಚ್ಚಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಇಂದು (ಜುಲೈ 18) ಸದನದಲ್ಲಿ ಜಿಟಿ ಮಾಲ್‌ನಲ್ಲಿ ರೈತನಿಗೆ ಅವಮಾನ ಮಾಡಿರುವ ವಿಚಾರ ಚರ್ಚೆಗೆ ಕಾರಣವಾಯಿತು. ಜಿಟಿ ಮಾಲ್ ಒಳಗೆ ಪಂಚೆ ಉಟ್ಟ ರೈತನನ್ನು ಬಿಡದೆ ಅವಮಾನಿಸಿದ ವಿಚಾರವಾಗಿ ಸಭಾಧ್ಯಕ್ಷ ಯು ಟಿ ಖಾದರ್ ಅವರು ಕೋಪಗೊಂಡರು. “ರೈತನಿಗೆ ಅವಮಾನ ಮಾಡಿದವನು ಎಷ್ಟೇ ದೊಡ್ಡವನಿರಲಿ, ಅವಮಾನ ಮಾಡಿದ್ದನ್ನು ಖಂಡಿಸಬೇಕು. ಸರ್ಕಾರ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

ಸ್ಪೀಕರ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಲಕ್ಷಣ ಸವದಿ, “ಎಲ್ಲಾ ಮಾಲ್‌ಗಳಿಗೂ ಒಂದೇ ನಿಯಮ ಮಾಡಬೇಕು. ಪಂಚೆ ನಮ್ಮ ಸಂಸ್ಕೃತಿ. ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ, ಆ ಮಾಲ್‌ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ” ಎಂದು ಒತ್ತಾಯಿಸಿದರು.

ಶಾಸಕ ಪ್ರಕಾಶ್ ಕೋಳಿವಾಡ ಕೂಡ ಎದ್ದು ನಿಂತು, “ರೈತನಿಗೆ ಅವಮಾನ ಮಾಡಿದ ಆ ಮಾಲ್ ಅನ್ನು ಮುಚ್ಚಬೇಕು” ಎಂದು ಆಗ್ರಹಿಸಿದರು.

ಸಚಿವ ಬೈರತಿ ಸುರೇಶ್ ಧ್ವನಿಗೂಡಿಸಿ, “ದೇವೇಗೌಡರು, ಸಿದ್ದರಾಮಯ್ಯ ಅವರು ಪಂಚೆ ಉಡುತ್ತಾರೆ. ಅವರು ಕ್ಲಬ್ ಗಳಿಗೆ ಏನಾದ್ರೂ ಹೋದರೆ ಬಿಡುತ್ತಾರೆ. ಆದರೆ, ಬೇರೆಯವರಿಗೆ ಆ ನಿಯಮ ಇಲ್ವಾ? ಎಂದು ಪ್ರಶ್ನಿಸಿದರು.

“ಏಳು ದಿನಗಳ ಕಾಲ‌ ಮಾಲ್ ಮುಚ್ಚಿಸುತ್ತೇವೆ. ಈಗಾಗಲೇ ಬಿಬಿಎಂಪಿ ಆಯುಕ್ತರ ಹತ್ತಿರ ಮಾತಾಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇದೆ, ಸರ್ಕಾರದ ಕ್ರಮ ಕೈಗೊಳ್ಳಬಹುದು” ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯ ಅಶೋಕ್ ಪಟ್ಟಣ ಮಾತನಾಡಿ, ರಾಜ್ಯದ ಎಲ್ಲ ಕ್ಲಬ್‌ಗಳು, ಮಾಲ್‌ಗಳಲ್ಲಿ ಒಂದೇ ನಿಯಮ ತರಬೇಕು. ಪಂಚೆ ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುಸಿದವರಿಗೆ ಪ್ರವೇಶ ಕೊಡಬೇಕು” ಎಂದರು.

ಘಟನೆಯ ಹಿನ್ನೆಲೆ : ಬೆಂಗಳೂರಿನ ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿರುವ ಜಿಟಿ ಮಾಲ್‌ನಲ್ಲಿ ಹಾವೇರಿ ಮೂಲದ ರೈತರೊಬ್ಬರನ್ನು ಅವಮಾನಿಸಿದ ಘಟನೆ ಜುಲೈ 16 ರಂದು ನಡೆದಿದೆ. ವಿಜಯನಗರದ ನಿವಾಸಿ ನಾಗರಾಜ್‌ ತಂದೆ ಹಾವೇರಿಯವರಾಗಿದ್ದು, ಬೆಂಗಳೂರಿಗೆ ಬಂದಾಗ ಸಿನಿಮಾ ತೋರಿಸಲೆಂದು ಜಿಟಿ ಮಾಲ್‌ಗೆ ಕರೆದುಕೊಂಡು ಹೋಗಿದ್ದರು.

ಸಿನಿಮಾ ಥಿಯೇಟರ್‌ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ತಪಾಸಣೆ ನಡೆಸುವ ಭದ್ರತಾ ಸಿಬ್ಬಂದಿ, ರೈತ ಪಂಚೆ ಉಟ್ಟಿರುವ ಕಾರಣಕ್ಕೆ ಥಿಯೇಟರ್ ಒಳಗೆ ಬಿಟ್ಟಿರಲಿಲ್ಲ. ಈ ಘಟನೆ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

You missed

error: Content is protected !!