• Tue. Apr 30th, 2024

೨೨೪ ಕ್ಷೇತ್ರಗಳಲ್ಲು ಆರ್ ಪಿ ಐ ಸ್ಪರ್ಧೆ – ಜ.೩೦ ಕೋಲಾರದಲ್ಲಿ ಸಮಾವೇಶ

PLACE YOUR AD HERE AT LOWEST PRICE

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಜ.30 ರಂದು ನಗರದ ಹಳೆ ಬಸ್ ನಿಲ್ದಾಣದ ಆವರಣದಲ್ಲಿ ಜಿಲ್ಲಾ ಕಾರ್ಯಕರ್ತರ ಸಮಾವೇಶ ಹಾಗೂ ನೂತನವಾಗಿ ಆರ್‌ಪಿಐ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಂ.ವೆಂಕಟಸ್ವಾಮಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್‌ಪಿಐ ಪಕ್ಷದ ಹಿರಿಯ ಮುಖಂಡ ನರಸಾಪುರ ನಾರಾಯಣಸ್ವಾಮಿ ಮಾಹಿತಿ ನೀಡಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.30  ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದ್ದು, ಚುನಾವಣೆ ಸಮೀಪ ಇರುವ ಹಿನ್ನೆಲೆ ಜಿಲ್ಲೆಯಲ್ಲಿ ಆರ್‌ಪಿಐ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹಾಗೂ ಸಂಘಟನೆ ಬಲಗೊಳಿಸುವ ಚರ್ಚೆಯನ್ನು ಸಮಾವೇಶದಲ್ಲಿ ನಡೆಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಈ ನಮ್ಮ ಸಮಾವೇಶವು ಮಹತ್ತರ ಪ್ರಮುಖತೆಯನ್ನು ಪಡೆಯುವ ರಾಜಕೀಯ ನಿರ್ಣಯಗಳನ್ನು ಮಂಡಿಸಲಿದೆ ಎಂದರು.

ಶ್ರೀನಿವಾಸಪುರ ತಾಲೂಕಿನವರಾದ ಆರ್ ಪಿ ಐ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಂ.ವೆಂಕಟಸ್ವಾಮಿ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಾ ಪಕ್ಷವನ್ನು ಗಟ್ಟಿಯಾಗಿ ಬಲಪಡಿಸಿದ್ದಾರೆ ಬಡವರ, ರೈತರ, ಮಹಿಳೆಯರ, ತೃತೀಯ ಲಿಂಗಗಳ ಪರವಾಗಿ ಧ್ವನಿ ಎತ್ತುತ್ತಾ ಗ್ರಾಮಮಟ್ಟದಿಂದ ರಾಷ್ಟ್ರಮಟ್ಟದವರೆಗೂ ಬೆಳೆದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.

ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅವರನ್ನು ಜನಪದ ಕಲಾತಂಡಗಳ ಬೃಹತ್ ಸಾಂಸ್ಕೃತಿಕ ಮೆರವಣಿಗೆಯ ಮೂಲಕ ವಿಶೇಷ ಅಲಂಕೃತ ಗೊಂಡಿರುವ ಭೀಮರಥದಲ್ಲಿ ಮೆರವಣಿಗೆ ಮಾಡುವ ಮೂಲಕ ಬಹಿರಂಗ ಸಭೆಗೆ ಕರೆತರಲಾಗುವುದು. ಸಭೆಯಲ್ಲಿ ಅವರನ್ನು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರಿಂದ ಸಾರ್ವಜನಿಕರಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಆರ್ ಪಿ ಐ ಪಕ್ಷದ ಹಿರಿಯ ಮುಖಂಡರಾದ ಎಂ.ಲಗುಮಯ್ಯ, ಪಾವಗಡ ಶ್ರೀರಾಮ್, ಎ.ಬಿ.ಹೊಸಮನಿ, ಅಶ್ವಥ್ ಅಂತೃಜ ಮುಂತಾದವರು ಹಾಗೂ ಜಿಲ್ಲೆಯಾದ್ಯಂತ 3ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದು, ನೂರಾರು ಸಂಖ್ಯೆಯಲ್ಲಿ ವಿವಿಧ ಪಕ್ಷ ಸಂಘ-ಸಂಸ್ಥೆಗಳ ಕಾರ್ಯಕರ್ತರು  ಆರ್‌ಪಿಐ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. ಒಟ್ಟಾರೆ ಈ ಸಮಾವೇಶವು ಜಿಲ್ಲೆಯ ರಾಜಕಾರಣದಲ್ಲಿ ಹೊಸ ಸಂಚಲವನ್ನು ಉಂಟುಮಾಡಲಿದೆ ಎಂದು ಹೇಳಿದರು.

ಆರ್‌ಪಿಐ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಜೆ.ಸಿ.ವೆಂಕಟರಮಣಪ್ಪ ಮಾತನಾಡಿ, ಜಿಲ್ಲೆಯ ಸಮಾನಮನಸ್ಕರಾದ ಡಾ.ಎಂ.ವೆಂಕಟಸ್ವಾಮಿ ಅವರು ಆರ್ ಪಿ ಐ ಪಕ್ಷ ಬಲವರ್ಧನೆಗೆ ಸಾಕಷ್ಟು ಶ್ರಮಿಸಿದ್ದಾರೆ ಅವರಿಗೆ ಪಕ್ಷದಲ್ಲೂ ಉನ್ನತ ಸ್ಥಾನ ಲಭಿಸಿರುವುದು ನಮ್ಮೆಲ್ಲರಿಗೂ ಸಂತೋಷವಾಗಿದೆ. ಮೂರು ತಿಂಗಳಲ್ಲಿ ಚುನಾವಣೆ ಜರುಗುವುದರಿಂದ ಪಕ್ಷವು ಹೆಚ್ಚಿನ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಕಾರ್ಯಧ್ಯಕ್ಷರು ಬೇಕಾದ ಎಲ್ಲಾ ರೀತಿಯ ಚುನಾವಣಾ ಚಟುವಟಿಕೆಗಳನ್ನು ಕೈಗೊಳ್ಳಲಿದ್ದಾರೆ. ಈ ಸಮಾವೇಶಗಳು ರಾಜಕೀಯ ದೃಢೀಕರಣದ ದಿಕ್ಸೂಚಿ ಆಗಲಿದೆ ಎಂದು ತಿಳಿಸಿದರು.

ರಾಜ್ಯದ 224 ಕ್ಷೇತ್ರಗಳಲ್ಲಿ ಪಕ್ಷದಿಂದ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಸ್ಪರ್ಧಿಸಲಿದ್ದು, ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮಾರ್ಗದಲ್ಲಿ ಚುನಾವಣಾ ಪ್ರಚಾರ ಮಾಡುತ್ತೇವೆ ಎಂದ ಅವರು, ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಭಾರತ ಮುಖಂಡರ ಸಭೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ರಾಷ್ಟ್ರೀಯ ಅಧ್ಯಕ್ಷರಾದ ಹಾಗೂ ಕೇಂದ್ರ ಸಚಿವ ರಾಂದಾಸ್ ಅಠವಳೆ ನೇತೃತ್ವದಲ್ಲಿ ಜರುಗಲಿದೆ. ಡಾ.ಎಂ.ವೆಂಕಟಸ್ವಾಮಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ರಾಜಕೀಯ ನಿರ್ಣಯಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರ್‌ಪಿಐ ಪಕ್ಷದ ರಾಜ್ಯ ಉಪಾಧ್ಯಕ್ಷ ಪಿ.ರವೀಂದ್ರನಾಥ್, ರಾಜ್ಯ ಗೌರವಾಧ್ಯಕ್ಷ ಎಂ.ಪಾಪಣ್ಣ, ಜಿಲ್ಲಾಧ್ಯಕ್ಷ ಗುಟ್ಟಹಳ್ಳಿ ಎಂ.ಶ್ರೀನಿವಾಸ್, ಶ್ರೀನಿವಾಸಪುರ ತಾ.ಅಧ್ಯಕ್ಷ ಚೌಡಪ್ಪ ಮತ್ತಿತರರು ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!