• Sun. May 19th, 2024

ಭೂಮಾಫಿಯಾ ಅಕ್ರಮದಲ್ಲಿ ಭಾಗಿಯಾಗಿದ್ದ ನಿವೃತ್ತ ಪ್ರೊಫೇಸರ್ ಸೇರಿದಂತೆ ಐವರ ಬಂಧನ- ಉಳಿದ ನಾಲ್ವರ ಪತ್ತೆಗೆ ವಿಶೇಷ ತಂಡ ರಚನೆ-ಎಸ್ಪಿ ನಾರಾಯಣ

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ತಲೆ ಎತ್ತುತ್ತಿರುವ ಭೂಮಾಫಿಯಾ ಅಕ್ರಮದಲ್ಲಿ ಭಾಗಿಯಾಗಿದ್ದ ನಿವೃತ್ತ ಪ್ರೊಫೆಸರ್ ಸೇರಿ ಐದು ಮಂದಿ ಭೂಗಳ್ಳರನ್ನು ಜೈಲಿಗಟ್ಟಿದ್ದು, ಉಳಿದ ೪ ಮಂದಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮುಳಬಾಗಲು ನಗರದ ತ್ಯಾಗರಾಜ ಕಾಲೋನಿಯ ವಾಸಿ ಸ್ವಯಂ ನಿವೃತ್ತ ಉಪನ್ಯಾಸಕ ಎಂ.ಗೋವಿಂದಪ್ಪ, ಕೋಲಾರ ತಾಲೂಕು ಕಾಳಹಸ್ತಿಪುರದ ಜಯರಾಮ್, ಕುಂಬಾರಹಳ್ಳಿ ಗ್ರಾಮದ ಸುರೇಶ್‌ಬಾಬು, ಆಂಧ್ರಪ್ರದೇಶದ ವಾಸಿಗಳಾದ ದೂರಿ ಪೆಂಚಲಯ್ಯ, ಆದಿನಾರಾಯಣ ಎಂಬ ಭೂಗಳ್ಳರನ್ನು ನಗರಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.

ಉಳಿದ ಆರೋಪಿಗಳಾದ ಅರುಣ್‌ಕುಮಾರ್, ಬಾಲಯ್ಯ, ಮಂಜುನಾಥಗೌಡ, ಕಾಳಹಸ್ತಿಪುರ ಅಂಬರೀಶ್ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ. ಅಲ್ಲದೆ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಗಡಿಪಾರು ಮಾಡಲಾಗುವುದು ಅಲ್ಲದೆ ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ನೊಂದವರಿಗೆ ಸಕ್ಷಮ ಪ್ರಾಧಿಕಾರದಿಂದ ಪರಿಹಾರ ಕಲ್ಪಿಸಲಾಗುವುದಾಗಿ ಹೇಳಿದರು.

ಕೋಲಾರ ತಾಲೂಕಿನ ಮಿಟ್ಟಕಲ್ಲಹಳ್ಳಿ ಗ್ರಾಮದ ಸ.ನಂ.೪೬ರಲ್ಲಿ ೨ ಎಕರೆ ಜಮೀನು (ಜಿಲ್ಲಾಧಿಕಾರಿಗಳ ಕಚೇರಿಯ ಬಳಿ) ಮೂಲತಃ ಬೆಂಗಳೂರು ವಾಸಿ ಪ್ರಹ್ಲಾದರಾವ್ ಅವರ ಹೆಸರಿನಲ್ಲಿದ್ದು, ಆರೋಪಿತರು ನಕಲಿ ದಾಖಲೆ ಸೃಷ್ಠಿಸಿ ತಮ್ಮ ಹೆಸರಿಗೆ ಮಾಡಿಕೊಂಡಿರುವ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಜೂ.೧೮ರಂದು ೯೫/೨೦೨೩ ಕಲಂ ೪೧೯, ೪೨೦, ೪೬೫, ೪೭೧, ೪೬೮, ೧೨೦ (ಬಿ) ರೆ:ವಿ ೩೪ ಐ.ಪಿ.ಸಿ. ರೀತ್ಯಾ ದೂರು ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರಿಗೆ ಕಂಡುಬಂದಂತೆ ಜಮೀನು ಕಡೆ ಹೆಚ್ಚಾಗಿ ಮಾಲೀಕರು ಕಾಣಿಸಿಕೊಳ್ಳದೇ ಇದ್ದುದನ್ನು ಮನಗಂಡ ಆರೋಪಿತರು ಆಂಧ್ರ ಮೂಲದ ಪೆಂಚಲಯ್ಯ ಅವರ ಆದಾರ್ ಕಾರ್ಡನ್ನು ನಕಲಿ ಮಾಡಿ ಅದರಲ್ಲಿ ಮೂಲ ಮಾಲೀಕ ಪ್ರಹ್ಲಾದರಾವ್ ಅವರ ಹೆಸರನ್ನು ಕೂರಿಸಿ ನಕಲಿ ಮಾಲೀಕನನ್ನು ಸೃಷ್ಠಿಸಿ ಅವರಿಂದ ಮೂಲ ಮಾಲೀಕನ ಸಹಿಯನ್ನು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾಡಿಸಿ ನಿವೃತ್ತ ಉಪನ್ಯಾಸಕ ಗೋವಿಂದಪ್ಪ ಅವರು ತಮ್ಮ ಹೆಸರಿಗೆ ೨೦೧೯ರಲ್ಲಿ ಕ್ರಯ ಮಾಡಿಕೊಂಡಿದ್ದರು.

ನಂತರ ೨೦೨೧ರಲ್ಲಿ ಗೋವಿಂದಪ್ಪ ಅವರು ತನಗೆ ಪರಿಚಯವಾದ ಬೆಳಗಾವಿ ಮೂಲದ ಶಿವಲಿಂಗ ಪಾಟೀಲ ಅವರಿಗೆ ನೀಡಬೇಕಿದ್ದ ದೊಡ್ಡ ಮೊತ್ತದ ಸಾಲದ ಮರುಪಾವತಿಗಾಗಿ ಇದೇ ಜಮೀನನ್ನು ಶಿವಲಿಂಗ ಪಾಟೀಲ ಅವರಿಗೆ ಕ್ರಯ ಮಾಡಿಕೊಟ್ಟು ಸಾಲ ತೀರಿಸಿದ್ದರು. ಇದೀಗ ಗೋವಿಂದಪ್ಪ ಸೇರಿದಂತೆ ಐವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಉಳಿದ ನಾಲ್ವರು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಹೇಳಿದರು.

ನಿವೃತ್ತ ಪ್ರೊಫೆಸರ್ ಗೋವಿಂದಪ್ಪ ಮೇಲೆ ೪ ಪ್ರಕರಣಗಳು ಹಾಗೂ ೨೦ಕ್ಕೂ ಹೆಚ್ಚು ಚೆಕ್‌ಬೌನ್ಸ್ ಪ್ರಕರಣಗಳಿವೆ. ಇವರು ಹಾಗೂ ಕಾಳಹಸ್ತಿಪುರ ಅಂಬರೀಶ್ ಪ್ರಮುಖ ಆರೋಪಿಗಳಾಗಿದ್ದಾರೆ ಎಂದರು.
ಎಸ್ಪಿ, ಡಿವೈಎಸ್ಪಿ ನೇತೃತ್ವದಲ್ಲಿ ನಗರಠಾಣೆ ವೃತ್ತ ನಿರೀಕ್ಷಕ ಆರ್.ಹರೀಶ್, ಪಿಎಸ್‌ಐ ಯೋಗೀಶ್‌ಕುಮಾರ್, ಸಿಬ್ಬಂದಿ ಎಎಸ್‌ಐ ವೆಂಕಟಮುನಿಯಪ್ಪ, ಮೋಹನ್, ಶ್ರೀನಾಥ್, ರವಿಚಂದ್ರ, ರವಿಕುಮಾರ್, ಆರ್.ನಾರಾಯಣಸ್ವಾಮಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಈ ಭೂಗಳ್ಳರು ಭೂಮಾಫಿಯಾ ಮಾತ್ರವಲ್ಲದೆ ಮೆಡಿಕಲ್ ಸೀಟ್, ಪಿಎಸ್‌ಐ ಸೇರಿದಂತೆ ವಿವಿಧ ಕೆಲಸಗಳನ್ನು ಕೊಡಿಸುವುದಾಗಿಯೂ ಅನೇಕರ ಬಳಿ ಹಣವನ್ನು ಪಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಇಂತಹವರಿಂದ ಜಿಲ್ಲೆಗೇ ಕಳಂಕ ಬರುವಂತಾಗಿದ್ದು, ಯಾರಿಗಾದರೂ ಇವರಿಂದ ಅನ್ಯಾಯವಾಗಿದ್ದರೆ ಕೂಡಲೇ ನಗರ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಎಸ್ಪಿ ಎಂ.ನಾರಾಯಣ ಮನವಿ ಮಾಡಿದರು.
ಜಮೀನುಗಳ ಮಾಲೀಕರು ಆಗಾಗ್ಗೆ ಜಮೀನುಗಳಿಗೆ ಭೇಟಿ ನೀಡುವ ಜತೆಗೆ ದಾಖಲೆಗಳನ್ನೂ ಪರಿಶೀಲನೆ ಮಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು. ಇನ್ನು ಡಿಸಿಸಿ ಬ್ಯಾಂಕ್‌ನಿಂದ ನೀಡಲಾಗಿರುವ ಸಾಲ ವಸೂಲಾತಿಗೆ ತೆರಳುವ ಸಿಬ್ಬಂದಿಗೆ ಮಹಿಳೆಯರು ತೊಂದರೆ ಕೊಡುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಅದು ಸರಿಯಲ್ಲ. ಸರಕಾರದಿಂದ ಸೂಕ್ತ ಸ್ಪಷ್ಟನೆ ಸಿಗುವವರೆಗೂ ವಸೂಲಾತಿಗೆ ತೆರಳದಂತೆ ಈಗಾಗಲೇ ಬ್ಯಾಂಕಿನವರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಮಹಿಳೆಯರೂ ಸೌಹಾದತೆಯಿಂದ ನಡೆದುಕೊಳ್ಳುವುದು ಉತ್ತಮ ಎಂದರು.

ಸುದ್ದಿಗೋಷ್ಟಿಯಲ್ಲಿ ಡಿವೈಎಸ್‌ಪಿ ಮುರಳಿಧರ್, ನಗರಠಾಣೆ ವೃತ್ತ ನಿರೀಕ್ಷಕ ಆರ್.ಹರೀಶ್, ಪಿಎಸ್‌ಐ ಯೋಗೀಶ್‌ಕುಮಾರ್ ಮತ್ತಿತರರಿದ್ದರು.

 

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!