• Fri. May 17th, 2024

PLACE YOUR AD HERE AT LOWEST PRICE

ಕ್ರಾಂತಿ ಕಾರಿಗಳ ಪಾಲಿನ ಕಂಚಿನ ಕಂಠದ ಗಾಯಕ ಗದ್ದರ್ ಇಂದು ತಮ್ಮ 74ನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸರಿ ಸುಮಾರು ಐದು ದಶಕಗಳ ಕಾಲ ದೇಶದ ಕಾರ್ಮಿಕ, ರೈತ, ದಲಿತ ಚಳುವಳಿಗಳೊಂದಿಗೆ ಅವಿನಾಭಾವ ಸಂಭಂಧವಿಟ್ಟುಕೊಂಡು. ಸಮ ಸಮಾಜದ ಕಲ್ಪನೆಯೊಂದಿಗೆ ನವ ಭಾರತದ ಸಾಕಾರಕ್ಕಾಗಿ ಜೀವನ ಸವೆಸಿದ ಅವಿಶ್ರಾಂತ ಹೋರಾಟಗಾರ ಗುಮ್ಮಡಿ ವಿಠಲ ರಾವ್(ಗದ್ದರ್) ಯುಗಾಂತ್ಯವಾಗಿದೆ.

ನನ್ನ ಕಾರ್ಮಿಕ ಸಂಘಟನೆಯ ಪ್ರಾರಂಭದ ದಿನಗಳಲ್ಲಿ ಗದ್ದರ್ ರವರ ಕಂಚಿನ ಕಂಠದ ಕ್ರಾಂತಿ ಗೀತೆಗಳು ನಮ್ಮ ಹೋರಾಟದ ಕಿಚ್ಚನ್ನು ಹೆಚ್ಚಿಸುತ್ತಿದ್ದವು. ಚಿಕ್ಕ ಮಗಳೂರಿನಲ್ಲಿ ನಕ್ಸಲ್ ಸಂಗಾತಿಗಳಾದ ಪಾರ್ವತಿ, ಹಾಜೀಮ ಪೋಲೀಸರ ಗುಂಡಿಗೆ ಬಲಿಯಾದಾಗ ಬೆಂಗಳೂರಿನಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಹಾಡಿದ್ದರು. ಚಿಕ್ಕ ಮಗಳೂರಿನ ಕೋಮು ಸೌಹಾರ್ಧ ವೇದಿಕೆಯ ಬೃಹತ್ ಸಮಾವೇಶದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಸಾಕೇತ್ ರಾಜನ್ ಹತ್ಯೆಯ ನಂತರ ಅವರ ದೇಹವನ್ನು ಅಂದಿನ ಸರ್ಕಾರ ಗುಪ್ತವಾಗಿ ದಹನ ಮಾಡಿದ್ದರ ವಿರುದ್ದ ಸ್ಮಶಾನದಲ್ಲಿಯೇ ಕ್ರಾಂತಿ ಗೀತೆಗಳ ಮೂಲಕ ತಡರಾತ್ರಿಯವರೆಗೆ ಪ್ರತಿಭಟನೆಯನ್ನು ಮಾಡಿದ್ದರು. ಅಂದಿನ ಕಾಲಕ್ಕೆ ಭಾಷೆಯ ಹಂಗಿಲ್ಲದೆ ವಿಧ್ಯಾವಂತ ಯುವಜನರನ್ನು ತಮ್ಮತ್ತ ಸೆಳೆಯುವ ಚುಂಬಕ ಶಕ್ತಿ ಅವರ ಹಾಡುಗಳಲ್ಲಿ ಮತ್ತು ನೃತ್ಯದಲ್ಲಿರುತ್ತಿತ್ತು. ನಾವು ಅವರೊಂದಿಗ ನೇರವಾಗಿ ಒಡನಾಡದಿದ್ದರೂ ಅವರ ಕ್ರಾಂತಿಕಾರಿ ನಿಲುವುಗಳಿಗೆ ಫಿದಾ ಆದಿದ್ದಂತೂ ನಿಜ. ಅವರ ಹಾಡುಗಳು ಕಾರ್ಮಿಕ ಕಾರ್ಯಕರ್ತರ ತರಭೇತಿಗಳಲ್ಲಿ ಕಡ್ಡಾಯ ಎನ್ನುವಂತಾಗಿದ್ದವು. ಒಟ್ಟಿನಲ್ಲಿ ಗದ್ದರ್ ಯುವ ಕ್ರಾಂತಿಕಾರರ ಮತ್ತು ಹೋರಾಟಗಾರರ ಪಾಲಿನ ಸ್ಪೂರ್ತಿಯ ಚಿಲುಮೆಯಾಗಿದ್ದರು.

ಈ ಸಹಸ್ರಮಾನದ ಪ್ರಾರಂಭದಲ್ಲಿ ಮುಂಬೈನಲ್ಲಿ ವರ್ಲ್ಡ್ ಸೋಷಿಯಲ್ ಪೋರಂ ನಡೆದಾಗ ಲಕ್ಷಾಂತರ ಜನರನ್ನು ಸೇರಿಸಿ ಮುಂಬೈ ರೆಸಿಟೆನ್ಸ್ ಸಂಘಟಿಸಿ ಆಳುವ ವರ್ಗದ ನಿದ್ದೆ ಗೆಡಿಸಿದ್ದರು. ತೆಲಂಗಾಣ ರಾಜ್ಯಕ್ಕಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಅದನ್ನು ಯಶಸ್ವಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗದ್ದರ್ ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರೂ ತಪ್ಪದೇ ಹಾಜರಾಗುತ್ತಿದ್ದೆವು. ಬಹುಶಃ ಕರ್ನಾಟಕದ ಮಹಾನ್ ನಕ್ಷಲ್ ಹೋರಾಟಗಾರ ಸಾಕೇತ್ ರಾಜನ್ ಪೋಲೀಸರಿಂದ ಹತ್ಯೆಯಾದ ದಿನ ಅವರು ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೆ ಕೊನೆ ಮತ್ತೆ ಬೆಂಗಳೂರಿಗೆ ಅವರು ಬರಲು ಸಾಧ್ಯವಾಗಲಿಲ್ಲ. ಸಾಕೇತ್ ರಾಜನ್ ಹತ್ಯೆಗೆ ಪ್ರತೀಕಾರವಾಗಿ ಪಾವಗಡ ಆಂಧ್ರ ಗಡಿಯ ವೆಂಕಟಮ್ಮನ ಹಳ್ಳಿಯಲ್ಲಿ ನಡೆದ ಪೋಲೀಸರ ಹತ್ಯಾಕಾಂಡದಲ್ಲಿ ಗದ್ದರರನ್ನೂ ಅಪರಾಧಿಯೆಂದು ಹೆಸರಿಸಿದ್ದರಿಂದ ಅವರ ಕರ್ನಾಟಕ ಪ್ರವೇಶ ಸಾಧ್ಯವಾಗಲಿಲ್ಲ. ಅವರ ಕಾರ್ಯಕ್ರಮಗಳಲ್ಲಿ ಮತ್ತೆ ಪಾಲ್ಗೊಳ್ಳುವ ಆಸೆ ಈಡೇರಲೇ ಇಲ್ಲ.

ಇಂದಿಗೂ ಯೂಟ್ಯೂಬ್ ನಲ್ಲಿ ಗದ್ದರ್ ರವರ ಹಾಡುಗಳನ್ನು ಕೇಳಿಸಿಕೊಳ್ಳುತ್ತೇನೆ. ಗದ್ದರ್ ತಮ್ಮ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡವರು, ಅನೇಕ ಭಾರಿ ಭೂಗತರಾಗಿದ್ದವರು, ಜೈಲುವಾಸ ಕಂಡವರು, ಗುಂಡೇಟನ್ನೂ ತಿಂದವರು.

ಈ ದೇಶ ಕಂಡ ಅಪರೂಪದ ಹೋರಾಟಗಾರ, ಅಪ್ರತಿಮ ಹಾಡುಗಾರ, ಆಶುಕವಿ ಗದ್ದರ್ ಈ ದೇಶದ ಕೋಟ್ಯಂತರ ಹೋರಾಟಗಾರರಿಗೆ ಸ್ಪೂರ್ತಿಯ ಚಿಲುಮೆ. ಗದ್ದರ್ ಹೆಸರು ಚಿರಸ್ಥಾಯಿವಾಗಲಿ. ಲಾಲ್ ಸಲಾಂ ಕಾಮ್ರೇಡ್!!!

ನಾಪಂಡ ಮುದ್ದಪ್ಪ , ಉದ್ಯಮಿ ಹಾಗೂ ಸಮಾಜ ಸೇವಕರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!