ಕಾಂಗ್ರೆಸ್ ಪಕ್ಷದ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ಶ್ಯಾಡೋ ಮುಖ್ಯಮಂತ್ರಿಯಾಗಿದ್ದು, ಅವರು ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಸ್ವತಂತ್ರರಾಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾದರೆ ನಾನು ಸ್ವಾಗತಿಸುತ್ತೇನೆ ಎಂದ ಅವರು, ತಾನೂ ಈಗಲೂ ಸ್ಥಳೀಯರಿಗೆ ಆಧ್ಯತೆ ನೀಡಬೇಕೆಂಬ ಅಭಿಪ್ರಾಯಕ್ಕೆ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿ, ಇದೇ ತಿಂಗಳ ೯ರಂದು ಕೋಲಾರಕ್ಕೆ ಅಗಮಿಸಲಿರುವ ಸಿದ್ಧರಾಮಯ್ಯನವರ ಕಾರ್ಯಕ್ರಮಕ್ಕೆ ಆಹ್ವಾನವಿದ್ದು ತಾನೂ ಭಾಗವಹಿಸುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಒಂದು ರಾಷ್ಟ್ರೀಯ ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ ಅದು ಸಹಜ. ಈ ಹಿಂದಿನ ಎಲ್ಲಾ ಕಹಿ ಘಟನೆಗಳನ್ನು ಮರೆತು ಚುನಾವಣೆಗಳನ್ನು ಒಟ್ಟಿಗೆ ಎದುರಿಸಲಾಗುವುದು. ಸಿದ್ಧರಾಮಯ್ಯ ರಾಜ್ಯದ ಮುಂಚೂಣಿ ನಾಯಕರಾಗಿದ್ದು, ಅವರ ಆಗಮನಕ್ಕೆ ನನ್ನಿಂದ ಯಾವುದೇ ವಿರೋಧವಿಲ್ಲ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಯಾವ ಕೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದ ಅವರು, ಹೈಕಮಾಂಡ್ ಅರ್ಜಿ ಸಲ್ಲಿಸಲು ಹೇಳಿತ್ತು ಅದಕ್ಕೆ ಸಲ್ಲಿಸಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ಸಿದ್ಧರಾಮಯ್ಯನವರ ಆಗಮನದ ಕುರಿತು ಘಟಬಂಧನ್ ನಾಯಕರು ಕರೆತರುತ್ತಿದ್ದಾರೆ ಎಂದು ಎಂಬಂತಾಗಿದೆ ಎನ್ನುವ ಮಾದ್ಯಮದವರ ಪ್ರಶ್ನೆಗೆ ಕಾಂಗ್ರೆಸ್ ಪಕ್ಷದಲ್ಲಿ ಆ ರೀತಿಯ ಗುಂಪುಗಳಿಲ್ಲ, ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ, ಘಟಬಂಧನ್ ಎನ್ನುವುದೆಲ್ಲಾ ಮಾಧ್ಯಮಗಳ ಸೃಷ್ಟಿಯಾಗಿದೆ ಈ ಕುರಿತು ಈ ಮುಂಚೆಯೂ ಸ್ಪಷ್ಟನೆ ನೀಡಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಗುಂಪುಗಾರಿಕೆ ಕುರಿತ ಪ್ರಶ್ನೆಗೆ ಜಾರಿಕೆ ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಪ್ರಸಾದ್‌ಬಾಬು, ಗ್ರಾಮಾಂತರ ವಿಭಾಗದ ಬ್ಲಾಕ್ ಅಧ್ಯಕ್ಷ ಉದಯಶಂಕರ್, ಎಸ್.ಸಿ. ವಿಭಾಗದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಕಿಸಾನ್ ಕೇತ್ ವಿಭಾಗದ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಮುರಳಿಗೌಡ, ಎಸ್.ಟಿ. ವಿಭಾಗದ ಅಧ್ಯಕ್ಷ ನಾಗರಾಜ್, ಸೇವಾದಳದ ಕೊಡಿಯಪ್ಪ, ಅಲ್ಪಸಂಖ್ಯಾತರ ವಿಭಾಗದ ಇಕ್ಬಾಲ್ ಅಹಮದ್ ಇದ್ದರು.
ಇದನ್ನೂ ಓದಿ : ಅರಣ್ಯ ಒತ್ತುವರಿ ತೆರವಿಗೆ ಮುಂದಾದ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನೂಕಾಟದಲ್ಲಿ ಮೂವರು ನೌಕರರಿಗೆ ಗಾಯ-ಪೊಲೀಸರಿಂದ ಪ್ರಕರಣ ದಾಖಲು