• Sun. May 19th, 2024

PLACE YOUR AD HERE AT LOWEST PRICE

ಕೆಜಿಎಫ್:ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ, ಕ್ಷೀರ ಕ್ರಾಂತಿ ಹರಿಕಾರ ಎಂ.ವಿ.ಕೃಷ್ಣಪ್ಪ, ವಿಧಾನಸಭಾ ಸ್ಪೀಕರ್ ಎಂ.ವಿ.ವೆಂಕಟಪ್ಪನವರಂತಹ ದಿಗ್ಗಜರು ವ್ಯಾಸಂಗ ಮಾಡಿದ ನಗರದ ಹೃದಯಭಾಗದಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿಗಳು ಶಿಥಿಲಗೊಂಡು ಅವಸಾನದ ಅಂಚಿಗೆ ತಲುಪಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೀವ ಭಯದಲ್ಲಿ ದಿನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಸಲ್ಡಾನಾ ವೃತ್ತದಲ್ಲಿರುವ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು 1936-37ನೇ ಸಾಲಿನಲ್ಲಿ ಸುಮಾರು 87 ವರ್ಷಗಳಷ್ಟು ಹಿಂದೆ ಕಲ್ಲು ಕಟ್ಟಡದಿಂದ ನಿರ್ಮಾಣವಾಗಿದ್ದು, ಮೇಲ್ಛಾವಣಿಯ ಮೇಲೆ ಆಳೆತ್ತರದ ಗಿಡಮರಗಳು ಬೆಳೆದಿರುವುದರಿಂದ ಮಳೆ ಬಂದರೆ ಸೋರುತ್ತಿದೆ. ಅಲ್ಲದೇ ಶಾಲೆಯ ಆವರಣದಲ್ಲಿ 6 ಹಳೆಯ ತರಗತಿ ಕೊಠಡಿಗಳು ಮತ್ತು 2 ಸಿಆರ್‍ಸಿ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಗೊಂಡು ಹಾವು, ಚೇಳುಗಳು ಮತ್ತು ಪುಂಡು ಪೋಕರಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟು ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಕಾಲೇಜು ಒಟ್ಟು 23 ಕೊಠಡಿಗಳನ್ನು ಹೊಂದಿದ್ದರೂ ಕೇವಲ ಒಂದೆರಡು ಕೊಠಡಿಗಳನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಎಲ್ಲ ಕೊಠಡಿಗಳು ಮೂರು ಹನಿ ಮಳೆ ಬಂತೆಂದರೆ ಸೋರುತ್ತಿದ್ದು, ಬೀಳುವ ಹಂತಕ್ಕೆ ತಲುಪಿದೆ. ಸುಮಾರು 87 ವರ್ಷಗಳ ಹಳೆಯದಾದ ಕಟ್ಟಡವಾಗಿರುವುದರಿಂದ ಕಟ್ಟಡದ ಮೇಲ್ಛಾವಣಿಗೆ ಹಾಕಿರುವ ಪ್ಲಾಸ್ಟಿಂಗ್/ಕಾಂಕ್ರೀಟ್ ಸಂಪೂರ್ಣವಾಗಿ ಹಾಳಾಗಿವೆ.

ಅನೇಕ ಸಂದರ್ಭಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ಮೇಲ್ಚಾವಣಿಯ ಪ್ಲಾಸ್ಟಿಂಗ್ ಬಿದ್ದು ಕೂದಲೆಳೆ ಅಂತರದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾರಾಗಿರುವ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿಯಿಂದ 10ನೇ ತರಗತಿಯವರೆಗೆ ಸುಮಾರು 171 ಮಂದಿ ವಿದ್ಯಾರ್ಥಿಗಳು ಮತ್ತು ಪದವಿ ಪೂರ್ವ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ಸುಮಾರು 100 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಪ್ರೌಢಶಾಲೆಯಲ್ಲಿ 8 ಮಂದಿ ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ಶೌಚಾಲಯಗಳು ಇಲ್ಲದೇ ಇರುವುದರಿಂದ ಮಕ್ಕಳು ಪರದಾಡುವಂತಾಗಿದೆ. ಕಾಲೇಜಿನ ಸುತ್ತ ಪ್ರಸ್ತುತ ಇರುವ ಕಾಂಪೌಂಡ್ ಗೋಡೆ ಕೇವಲ ಮೂರ್ನಾಲ್ಕು ಅಡಿಗಳಷ್ಟು ಮಾತ್ರ ಎತ್ತರವಾಗಿದ್ದು, ಶಾಲೆಗೆ ಬರುವ ಮಕ್ಕಳು ಶಿಕ್ಷಕರ ಕಣ್ತಪ್ಪಿಸಿ ಕಾಂಪೌಂಡ್ ಗೋಡೆ ಹಾರಿ ಶಾಲೆಗೆ ಚಕ್ಕರ್ ಆಗುವುದು ಸರ್ವೇ ಸಾಮಾನ್ಯವಾಗಿದೆ.

ಅಲ್ಲದೇ ಕಾಂಪೌಂಡ್ ಗೋಡೆ ಅಲ್ಲಲ್ಲಿ ಬಿದ್ದು ಹೋಗಿರುವುದರಿಂದ ಹೊರಗಿನಿಂದ ದನಕರುಗಳು, ಬೀದಿ ನಾಯಿಗಳು ಶಾಲಾ ಆವರಣದೊಳಗೆ ಪ್ರವೇಶಿಸಿ ಇಲ್ಲಿ ನೆಡುವ ಗಿಡಗಳನ್ನು ಕಿತ್ತುಹಾಕಿ ಮತ್ತು ಬೀದಿನಾಯಿಗಳು ವಿದ್ಯಾರ್ಥಿಗಳ ಮೇಲೆರಗಿ ಕಚ್ಚಿ ತೊಂದರೆಯನ್ನುಂಟುಮಾಡಿವೆ ಎಂದು ಪೋಷಕರು ದೂರಿದ್ದಾರೆ.

ಕಟ್ಟಡದ ದುಃಸ್ಥಿತಿ ಕುರಿತು ಶಾಲೆಯ ವತಿಯಿಂದ ಈಗಾಗಲೇ ಹಿರಿಯ ಅಧಿಕಾರಿಗಳು, ನಗರಸಭೆ ಮತ್ತು ಜನಪ್ರತಿನಿಧಿಗಳು ಸೇರಿದಂತೆ ಸಂಬಂಧಪಟ್ಟವರೆಲ್ಲರಿಗೂ ಸಾಕಷ್ಟು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಂಡೂ ಕಾಣದಂತೆ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ.

ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಾದರೂ ಹೇಗೆ ಎಂದು ಪೋಷಕರು ಪ್ರಶ್ನಿಸುತ್ತಿದ್ದು, ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕಾಲೇಜಿನ ಕಟ್ಟಡವನ್ನು ದುರಸ್ಥಿಗೊಳಿಸಬೇಕಾಗಿದೆ ಎಂಬುದು ಪೋಷಕರ ಅಳಲಾಗಿದೆ.

ಶ್ರೀಮಂತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುತ್ತಾರೆ. ಆದರೆ, ಬಡವರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಅನಿವಾರ್ಯವಾಗಿದೆ. ಸರ್ಕಾರಿ ಶಾಲೆಯಲ್ಲಿ ಸೌಲಭ್ಯದ ಕೊರತೆಯಿಂದ ಮಕ್ಕಳು ಪರದಾಡುತ್ತಿದ್ದಾರೆ. ಶಾಲೆಯ ಕಟ್ಟಡದ ಚಾವಣಿ ಕಡಿದು ಬೀಳುತ್ತಿದೆ. ಇದರಿಂದ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರಿಕೆ ಆಗುತ್ತಿದೆ ಎನ್ನುತ್ತಾರೆ ಆನಂದ್ ಎಂಬುವವರು.

ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲ್ಲೂಕಿನ ಯರಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು 3ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ತಲೆಗೆ ಗಾಯಗಳಾಗಿದೆ.  ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡವನ್ನು ದುರಸ್ಥಿಗೊಳಿಸದೇ ಹೋದಲ್ಲಿ ಇಂತಹ ಘಟನೆ ಇಲ್ಲಿ ಯೂ ಸಂಭವಿಸಿ ಅನಾಹುತಗಳು ಸಂಭವಿಸುವುದರಲ್ಲಿ ಯಾವುದೇ ಸಂದೇಹವಿಲ್ಲ  ಎನ್ನುತ್ತಾರೆ ಸೆಲ್ವರಾಣಿ.

ಸರ್ಕಾರದಿಂದ 9 ಲಕ್ಷ ರೂ ದುರಸ್ಥಿ ಕಾಮಗಾರಿಗಾಗಿ ಅನುದಾನ ಬಿಡುಗಡೆಯಾಗಿತ್ತು, ಶಾಲೆಯ ಬಾಗಿಲು, ಕಿಟಕಿ, ಪ್ಲಾಸ್ಟಿಂಗ್, ಫ್ಲೋರಿಂಗ್ ಸೇರಿದಂತೆ ಎಲ್ಲವನ್ನು ಅಳತೆ ಮಾಡಿಕೊಂಡು ಎಸ್ಟಿಮೇಟ್ ಮಾಡಲಾಗಿದೆ. ಸರ್ಕಾರದಿಂದ ಈ ಹಿಂದೆ ಎಸ್ಟಿಮೇಟ್ ಮಾಡಿದ್ದ ಎಲ್ಲಾ ಹಳೆಯ ಕೆಲಸಗಳನ್ನು ನಿಲ್ಲಿಸುವಂತೆ ಆದೇಶ ಬಂದಿದ್ದರಿಂದ ಯಾವುದೇ ಕಾಮಗಾರಿಯನ್ನು ಪ್ರಾರಂಭಿಸಲಾಗಲಿಲ್ಲ. ಸರ್ಕಾರದಿಂದ ಆದೇಶ ಬಂದೊಡನೆ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು  ಪಿಆರ್‍ಇಡಿ ಎಇಇ ಎಚ್.ಡಿ.ಶೇಷಾದ್ರಿ ಪ್ರತಿಕ್ರಿಯಿಸಿದ್ದಾರೆ.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!