• Thu. May 16th, 2024

ಕೋಲಾರದಲ್ಲಿ ದಲಿತ ಸಾಹಿತ್ಯ ಪರಿಷತ್ ಬೆಳ್ಳಿ ಹಬ್ಬ ಸಂಭ್ರಮಕ್ಕೆ ಚಾಲನೆ ಬರಹಗಾರರು ಸಂಬಂಧ ಬೆಸೆಯುವ ಸೂಜಿಗಳಾಗಬೇಕು – ಕೋಟಿಗಾನಹಳ್ಳಿ ರಾಮಯ್ಯ

PLACE YOUR AD HERE AT LOWEST PRICE

 

ಕೋಲಾರ: ಮಾತು ಮತ್ತು ನುಡಿಗಳಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ದಲಿತ ನುಡಿಕಾರರು ತಪ್ಪು ಮಾಡದ ವಿವೇಕವಂತರಾಗಿ, ಕರುಳು ಬಳ್ಳಿಯ ಸಂಬಂಧಗಳನ್ನು ಬೆಸೆಯುವ ಸೂಜಿಗಳಾಗಬೇಕು ಎಂದು ಸಾಹಿತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ದಲಿತಸಾಹಿತ್ಯ ಪರಿಷತ್ ರಾಜ್ಯ ಮತ್ತು ಜಿಲ್ಲಾ ಘಟಕಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಬೆಳ್ಳಿ ಸಂಭ್ರಮ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮುದಾಯದ ನೋವುಗಳ ಅರಿಯವರು ಬರಹಗಾರರಾಗುವುದಿಲ್ಲ, ಸಮಕಾಲೀನತೆಯೇ ಸೃಜಶೀಲತೆ ಎಂಬುದನ್ನು ಅರಿತು ದಲಿತ ಅಸ್ಮಿತೆ ಮತ್ತು ದಲಿತ ಬರಹಗಾರರ ಇತಿಹಾಸವನ್ನು ಇದ್ದಂತೆ ಗ್ರಹಿಸುವ ಅಂತ?ಶಕ್ತಿ ಸಿದ್ಧಮಾಡಿಟ್ಟಕೊಳ್ಳಬೇಕು ಎಂದು ಸಲಹೆ ನೀಡಿದರು.
ದಲಿತ ಬರಹಗಾರರು ಏಕಾಂಗಿಯಾಗಿ ಇದ್ದ ಸಂದರ್ಭದಲ್ಲಿಯೇ ದೇವನೂರು ಮಹಾದೇವ ಅವರು ನಾನು ಬರೆದ ಬೆರೆಳಿನಷ್ಟು ಅಭಿವ್ಯಕ್ತಿಗೆ ಇಷ್ಟು ದೊಡ್ಡ ಮಟ್ಟದ ಸಂಚಲನ ಸಿಗುತ್ತಿದೆಎಂದಾದರೆ ಇಡೀ ಸಮುದಾಯ ಮಾತನಾಡಿದರೆ ಏನಾಗಬಹುದು ಎಂಬ ಪ್ರಶ್ನೆ ಮಾಡಿದ್ದರು, ಇದು ದಲಿತ ಸಾಹಿತಿಗಳ ಪ್ರಜ್ಙೆಯ ಬಿಂದುವಾಗಬೇಕು, ಇಂದು ಬರಹಗಾರರ ಸಂಖ್ಯೆ ಹೆಚ್ಚುತ್ತಿಗೆ ಆದರೆ ಬರಗಾರರಾಗುವುದು ಕಡು ಕಷ್ಟದ ಕೆಲಸ ಕೆಂಡದ ಕೆಲಸ ಎನ್ನುವುದನ್ನು ಅರಿಯಬೇಕು, ಅನುಭವ, ಅಭಿವ್ಯಕ್ತಿ ನುಡಿಗಳು ಅಪ್ರಮಾಣಿಕವಾದಾಗ ಕೂಡಿಸುವ ಬದಲು ಒಡೆಯುತ್ತವೆ ಎಂಬ ಎಚ್ಚರ ಇರಬೇಕು ಎಂದರು. ಸೂಜಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದರು.
ಸಮುದಾಯ ಒಡೆದು ಹೋಗಿರುವ ಈ ದಿನಗಳಲ್ಲಿ, ಅಂಬೇಡ್ಕರ್ ಹೇಳಿದ ಮೂರು ನುಡಿಗಳಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟವನ್ನು ಸಮಕಾಲೀನವಾಗಿ ವಿಸ್ತರಿಸಬೇಕು, ಶಿಕ್ಷಣ ಸಾಂಸ್ಕೃತಿಕವಾಗಬೇಕು, ಹೋರಾಟ ಆಕ್ರಮಣಶೀಲವಾಗಬೇಕು, ಸಂಘಟನೆ ಜಾಗತಿಕವಾಗಬೇಕು, ದಲಿತರ ಹೋರಾಟ ಜಾಗತಿಕವಾಗಿ ಕಟ್ಟಲು ಬೇಕಾದ ಸಿದ್ಧತೆಗಳನ್ನು ದಲಿತ ಬರಹಗಾರರು ನೀಡುವಂತಿರಬೇಕು, ಇದಕ್ಕಾಗಿಯೇ ದಲಿತ ಬರಹಗಾರರ ಸಂಖ್ಯೆ ದ್ವಿಗುಣಗೊಳ್ಳುವುದಕ್ಕಿಂತಲೂ ಸಾಂಸ್ಕೃತಿಕ ಪುನರ್ ನಿರ್ಮಾಣದ ಪ್ರಜ್ಞೆ ಹೊಂದಬೇಕು ಎಂದರು.
ಬೆಂಗಳೂರು ವಿವಿ ಪ್ರಾಧ್ಯಾಪಕಿ ಡಾ.ಸುಮಿತ್ರಾ ಮಾತನಾಡಿ, ಸಾಹಿತ್ಯವನ್ನು ಹೊಸ ಚಿಂತನೆ ಮೂಲಕ ಕಟ್ಟಿಕೊಡಬೇಕಾಗಿದೆ, ಅಂಬೇಡ್ಕರ್ ಇದೇ ರೀತಿಯ ಸಾಕ್ಷಿ ಪ್ರಜ್ಞೆಯಿಂದ ಸಮುದಾಯವನ್ನು ಕಟ್ಟಿಕೊಟ್ಟಿದ್ದರು, ಅವರ ಚಳುವಳಿಯ ಹಾದಿ ಹಲವರಿಗೆ ಶಕ್ತಿ ನೀಡಿದೆ. ಆದ್ದರಿಂದ ಯಾವುದೇ ಹೋರಾಟ ಮಹಿಳೆಯರನ್ನೂ ನಿರ್ಲಕ್ಷಿಸಿದರೆ ಊರ್ಜಿತವಾಗುವುದಿಲ್ಲ ಎಂದು ತಿಳಿಸಿ, ಹತಾಶೆಗೊಳ್ಳದೇ ಜಾಗೃತರಾಗಿ ಬರವಣಿಗೆಯನ್ನು ರೂಪಿಸಿಕೊಳ್ಳಬೇಕು ಎಂದರು.
ಸಾಹಿತಿ ಕುಪ್ಪನಹಳ್ಳಿ ಡಾ.ಎಂ.ಬೈರಪ್ಪ ಕವನ ವಾಚನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಾಹಿತ್ಯಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ವಹಿಸಿ, ಸಾಧಕರನ್ನು ಸನ್ಮಾನಿಸಿದರು.
ಕೋಲಾರ ಜಿಲ್ಲಾ ದಸಾಪ ಅಧ್ಯಕ್ಷ ಡಾ.ಜಯಮಂಗಲ ಚಂದ್ರಶೇಖರ್(ಜಮು.ಚಂದ್ರ) ಪ್ರಾಸ್ತಾವಿಕವಾಗಿ ಪರಿಷತ್ತಿನ ಇತಿಹಾಸವನ್ನು ವಿವರಿಸಿದರು. ವೇದಿಕೆಯಲ್ಲಿ ದಸಾಪ ರಾಜ್ಯಕಾರ್ಯದರ್ಶಿ ಸುಭಾಷ್ ಹೊದಲೂರು, ವಿಭಾಗೀಯ ಸಂಯೋಜಕ ಗಣಪತಿ ಗೋ.ಛಲವಾದಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಕೆ.ವೆಂಕಟೇಶಪ್ಪ, ಪತ್ರಕರ್ತ ಕೆ.ಎಸ್.ಗಣೇಶ್, ಬೆಂಗಳೂರು ಜಿಲ್ಲಾಧ್ಯಕ್ಷ ಗೌಡಗೇರಿ ಮಾಯುಶ್ರೀ, ಬಂಗಾರಪೇಟೆ ತಾಲ್ಲೂಕು ಗೌರವಾಧ್ಯಕ್ಷ ವಿ.ಆರ್.ಮುನಿನಾರಾಯಣ ಉಪಸ್ಥಿತರಿದ್ದರು.
ಇಂಚರ ನಾರಾಯಣಸ್ವಾಮಿರಿಂದ ಸಂವಿಧಾನ ಪೀಠಿಕೆ ವಾಚನ, ಯಡಹಳ್ಳಿ ಶ್ರೀನಿವಾಸ್ ಸ್ವಾಗತಿಸಿ, ತ್ಯಾಗರಾಜ್ ವಂದಿಸಿ, ಎಂ.ವೆಂಕಟೇಶಮೂರ್ತಿ ನಿರೂಪಿಸಿದರು. ದೊಡ್ಡಮಲ್ಲೆ ರವಿ ಸೊಣ್ಣೂರುಗೋವಿಂದು, ಮತ್ತಿಕುಂಟೆ ಕೃಷ್ಣ, ಈನೆಲ ಈಜಲ ವೆಂಕಟಾಚಲಪತಿ, ಲಕ್ಕೂರು ವೆಂಕಟೇಶ್, ಪಿಚ್ಚಳ್ಳಿ ಮಂಜು, ಮುರಳಿಬಾಬು, ಅಜಯ್, ಜಿ.ವೈ.ರಾಧಮ್ಮರಿಂದ ಹೋರಾಟದ ಹಾಡುಗಳ ಗಾಯನವಾಯಿತು. ಕುಮಾರಿವರ್ಷಿಣಿ ಮೋಹನ್ ಬುದ್ದಗೀತೆಗೆ ಕುಚುಪುಡಿ ನೃತ್ಯ ಮಾಡಿ ಮನರಂಜಿಸಿದರು.
ಕವಿಗೋಷ್ಟಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳ ಕವಿಗಳು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ದಲಿತ ಮುಖಂಡ ಸಿ.ಎಂ.ಮುನಿಯಪ್ಪ ವಹಿಸಿದ್ದರು. ಬೆಳ್ಳಿ ಸಂಭ್ರಮದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

 

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!