• Mon. May 20th, 2024

PLACE YOUR AD HERE AT LOWEST PRICE

ಕೋಲಾರ:ಬೆಂಗಳೂರು ಉತ್ತರ ವಿವಿಯ ೩ನೇ ಘಟಿಕೋತ್ಸವ ಜು.೪ ರ ಬೆಳಗ್ಗೆ ೧೦-೩೦ ಗಂಟೆಗೆ ನಗರ ಹೊರವಲಯದ ನಂದಿನಿ ಪ್ಯಾಲೇಸ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದು, ಮೂವರು ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಡಾಕ್ಟರೇಟ್, ೪೪ ಮಂದಿ ಪ್ರಥಮ ರ‍್ಯಾಂಕ್,ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳಿಗೆ ಕುಲಾಧಿಪತಿಗಳು ಹಾಗೂ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಪದವಿ ಪ್ರದಾನ ಮಾಡುವರು ಎಂದು ವಿವಿಯ ಕುಲಪತಿ ಪ್ರೊ.ನಿರಂಜನ ತಿಳಿಸಿದ್ದಾರೆ.

ಭಾನುವಾರ ನಗರ ಹೊರವಲಯದ ಟಮಕದ ಉತ್ತರ ವಿವಿಯ ಆಡಳಿತ ಭವನದಲ್ಲಿ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಸಮ ಕುಲಾಧಿಪತಿಗಳೂ ಆದ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರಲಿದ್ದು, ಖ್ಯಾತ ಪರಿಸರ ಮತ್ತು ಅಭಿವೃದ್ದಿ ಪತ್ರಕರ್ತ ಪದ್ಮಶ್ರೀ ಡಾ.ಪಿ.ಸಾಯಿನಾಥ್ ಮುಖ್ಯ ಅತಿಥಿಗಳಾಗಿದ್ದು, ಘಟಿಕೋತ್ಸವ ಭಾಷಣ ಮಾಡುವರು ಎಂದು ತಿಳಿಸಿದರು.

ಬೆಳಗ್ಗೆ ೧೦-೩೦ ರಿಂದ ೧೨-೦೫ ಗಂಟೆವರೆಗೂ ನಡೆಯುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಆಹ್ವಾನಿತರು ಬೆಳಗ್ಗೆ ೧೦ ಗಂಟೆಯ ಒಳಗೆ ಹಾಜರಿದ್ದು, ನಿಗಧಿಗೊಳಿಸಿದ ಆಸನಗಳಲ್ಲಿ ಆಸೀನರಾಗಬೇಕು, ಮತ್ತು ಆಹ್ವಾನಿತರಿಗೆ ಮಾತರವೇ ಪ್ರವೇಶವಿದ್ದು, ಶಿಷ್ಟಾಚಾರ ಪಾಲಿಸಲಾಗುವುದು ಎಂದರು.

ಬೆಂಗಳೂರು ಉತ್ತರ ವಿವಿಯಿಂದ ಕಳೆದ ಬಾರಿಯೂ ಮೂವರಿಗೆ ಡಾಕ್ಟರೇಟ್ ಗೌರವ ನೀಡಲಾಗಿದ್ದು, ಈ ಬಾರಿಯೂ ವಿವಿಧ ಕ್ಷೇತ್ರಗಳ ಮೂವರು ಸಾಧಕರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಿ.ಎಂ.ಮುನಿಯಪ್ಪರ ಸಾಮಾಜಿಕ ಸೇವೆ.

ಸಾಮಾಜಿಕ ಸೇವಾ ಕ್ಷೇತ್ರದಿಂದ ೪ ದಶಕಗಳಿಂದ ದಲಿತರು, ಶೋಷಿತರ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೋಲಾರದ ಹಿರಿಯ ಪತ್ರಕರ್ತ ಸಂಚಿಕೆ ದಿನಪತ್ರಿಕೆಯ ಸಂಪಾದಕ ಸಿ.ಎಂ.ಮುನಿಯಪ್ಪ ಅವರನ್ನು  ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.

೧೯೭೮ ರಿಂದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಂಚಾಲಕರಾಗಿ ರಾಜ್ಯ ಸಮಿತಿ ಸದಸ್ಯರಾಗಿ ನಿರಂತರವಾದ ಹೋರಾಟದಲ್ಲಿ ಪೂರ್ಣಾವಧಿ ತೊಡಗಿಸಿಕೊಂಡಿದ್ದ ಮುನಿಯಪ್ಪ, ದಲಿತ ಭೂ ಹೋರಾಟಗಳು, ಜೀತಪದ್ದತಿ ನಿರ್ಮೂಲನೆಗೆ, ದಲಿತರ ಮೇಲಿನ ದೌರ್ಜನ್ಯ ತಡೆಗೆ ಹಾಗೂ ದಲಿತರ ಶೈಕ್ಷಣಿಕ ಉನ್ನತಿಗೆ ಶ್ರಮಿಸಿದ್ದುಮಾತ್ರವಲ್ಲ, ದಲಿತ ಸಮುದಾಯದ ಸ್ವಾವಲಂಬಿ ಹಾಗೂ ಆತ್ಮಗೌರವದ ಬದುಕಿಗಾಗಿ ವೈಯುಕ್ತಿಕ ಬದುಕನ್ನು ಮುಡುಪಾಗಿಟ್ಟ ಐತಿಹಾಸಿಕ ಹಿನ್ನಲೆ ಗಮನಿಸಿ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ-ಹರೀಶ್‌ಹಂದೆ.

೧೯೯೫ರಲ್ಲಿ ಜಗತ್ತಿನ ಸೌರಶಕ್ತಿಯ ಹರಿಕಾರನೆಂದೇ ಖ್ಯಾತರಾದ ಹರೀಶ್ ಹಂದೆ, ತಮ್ಮ ಸೋಲಾರ್ ಎಲೆಕ್ಟಿçಕ್ ಲೈಟಿಂಗ್ ಕಿಂಪನಿಯ ಮೂಲಕ ಕೇವಲ ಒಂದೂವರೆ ದಶಕದಲ್ಲಿ ಕರ್ನಾಟಕದ ೧.೨ ಲಕ್ಷ ಬಡವರ ಗುಡಿಸಲುಗಳನ್ನು ಸೂರ್ಯನ ಶಕ್ತಿಯ ಮೂಲಕ ಬೆಳಗಿದ ಸಾಧನೆಗೆ ಇಡೀ ವಿಶ್ವವೇ ಗುರುತಿಸಿ, ಗೌರವಿಸಿದೆ.

ಅವರ ಈ ಸಾಧನೆಗಾಗಿ ೨೦೧೧ ರಲ್ಲಿ ರಾಮೋನ್ ಮ್ಯಾಗ್ಸಸ್ಸೆ ಪ್ರಶಸ್ತಿಗೂ ಭಾಜನರಾಗುವಂತೆ ಮಾಡಿದ್ದು, ಇವರು ಮೂಲತಃ  ಉಡುಪಿ ಜಿಲ್ಲೆಯವರಾಗಿದ್ದು, ಸೌರಶಕ್ತಿಯ ಮಹತ್ವವನ್ನು ಜಗತ್ತಿಗೆ ತೋರಿಸಿಕೊಟ್ಟ ಇವರ ಸಾಧನೆಗೆ ಸಾಟಿಯೇ ಇಲ್ಲ. ಇವರನ್ನು ಸಹಾ ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.

ಪದ್ಮಶ್ರೀ ಪುರಸ್ಕೃತ ಮುನಿವೆಂಕಟಪ್ಪ.

ಕೋಲಾರ ಜಿಲ್ಲೆಯ ಬೆಂಗಳೂರು ಉತ್ತರ ವಿವಿ ವ್ಯಾಪ್ತಿಯ ಶಿಢ್ಲಘಟ್ಟ ತಾಲ್ಲೂಕಿನವರಾದ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ, ತಮಟೆ ನಾದದ ಮೂಲಕ ಇಡೀ ದೇಶದ ಗಮನ ಸೆಳೆದವರು. ಸ್ಥಳೀಯ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸಿದ ಅವರಿಗೆ ಈಗಾಗಲೇ ಭಾರತ ಸರ್ಕಾರ ಪದ್ಮಶ್ರೀ ಗೌರವ ನೀಡಿ ಸತ್ಕರಿಸಿದೆ.

ಬೆಂಗಳೂರು ಉತ್ತರ ವಿವಿ ಇವರನ್ನು ಕಲೆ,ಸಾಹಿತ್ಯ,ಸಂಸ್ಕೃತಿ ಕ್ಷೇತ್ರದಿಂದ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದ್ದು, ಈ ಎಲ್ಲಾ ಮೂವರು ಸಾಧಕರಿಗೆ ಜು.೪ ರಂದು ನಡೆಯುವ ಘಟಿಕೋತ್ಸವದಲ್ಲಿ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ವಿವರಿಸಿದರು.

ಚಿನ್ನದಪದಕ ಸಾಧನೆ ಹೆಣ್ಮಕ್ಕಳೇ ಮೇಲುಗೈ.

ಪರೀಕ್ಷಾಂಗ ಕುಲಸಚಿವ ಪ್ರೊ.ಡಿ.ಡಾಮಿನಿಕ್ ಮಾತನಾಡಿ, ಬೆಂಗಳೂರು ಉತ್ತರ ವಿವಿಯಿಂದ ಈ ಸಾಲಿನಲ್ಲಿ ಒಟ್ಟು ೨೦೩೨೪ ಮಂದಿಗೆ ಪದವಿ ಪ್ರದಾನ ಮಾಡುತ್ತಿದ್ದು, ಅವರಲ್ಲಿ  ಸ್ನಾತಕ, ಬಿಎಡ್,ಬಿಪಿಎಡ್ ಪದವಿಯಲ್ಲಿ ೧೬ ಮಂದಿಗೆ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ೨೮ ಮಂದಿ ಸೇರಿದಂತೆ ಒಟ್ಟು ೪೪ ಮಂದಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ.

ಸ್ನಾತಕ ಪದವಿಯಲ್ಲಿ ೧೦ ಮಂದಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ೨೨ ಮಂದಿ ಸೇರಿ ೩೨ ಹೆಣ್ಣು ಮಕ್ಕಳು ಚಿನ್ನದ ಪದಕಕ್ಕೆ ಭಾಜನರಾಗಿ ಮೇಲುಗೈ ಸಾಧಿಸಿದ್ದು, ಉಳಿದಂತೆ ಸ್ನಾತಕದಲ್ಲಿ ೬ ಮತ್ತು ಸ್ನಾತಕೋತ್ತರದಲ್ಲಿ ೬ ಸೇರಿದಂತೆ ೧೨ ಮಂದಿ ಗಂಡು ಮಕ್ಕಳಿಗೆ ಚಿನ್ನದಪದಕ ಸಿಕ್ಕಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ವಿವಿಯ ಆಡಳಿತ ಕುಲಸಚಿವರಾದ ಪ್ರೊ.ಎನ್.ನರಸಿಂಹಮೂರ್ತಿ,ವಿವಿಯ ಹಣಕಾಸು ಅಧಿಕಾರಿ ವಸಂತಕುಮಾರ್, ವಿವಿಯ ಸಿಂಡಿಕೇಟ್ ಸದಸ್ಯರಾದ ಪ್ರೊಫೆಸರ್ ಬಿ.ಆರ್. ಸುಪ್ರೀತ್,  ಕೆ.ಬಿ.ಹನುಮಂತರಾಜು ಉಪಸ್ಥಿತರಿದ್ದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!