• Sun. May 5th, 2024

PLACE YOUR AD HERE AT LOWEST PRICE

ಮೀಸಲಾತಿ ಜಾರಿಯಾದ ಈ 100 ವರ್ಷಗಳ ನಂತರವೂ ಮೀಸಲಾತಿಗೆ ಸಂಬಂಧಪಟ್ಟಂತೆ ಬಹುತೇಕ ಸಮಸ್ಯೆ ಮತ್ತು ಸವಾಲುಗಳಿವೆ. ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕಿಗಾಗಿ ಆಂದೋಲನ ನಡೆಸುವ ಸ್ಥಿತಿ ಎದುರಾಗಿದೆ ಎಂದು ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎಚ್ ಎಸ್ ನಾಗಮೋಹನ್‌ ದಾಸ್‌ ಹೇಳಿದರು.

ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಅತಿ ಹಿಂದುಳಿದ ಸಮುದಾಯಗಳ ಜಾಗೃತಿ ವೇದಿಕೆ ಆಯೋಜಿಸಿದ್ದ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿಯ ಇಕ್ಕಟ್ಟು ಬಿಕ್ಕಟ್ಟು ಸಂವಾದದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಭಾರತ ದೇಶದಲ್ಲಿ 4,635 ಉಪಜಾತಿಗಳಿದ್ದು, ಪ್ರತಿಯೊಂದು ಉಪಜಾತಿಗೂ ಪ್ರತ್ಯೇಕ ಉಪಕಸುಬುಗಳಿವೆ. ಬಹುತೇಕ ಉಪಜಾತಿಗಳು ಸಾಮಾಜಿಕ ನ್ಯಾಯದಿಂದ ವಂಚಿತವಾಗಿವೆ” ಎಂದು ತಿಳಿಸಿದರು.

“12 ವರ್ಷಗಳ ಹಿಂದೆಯೇ ಸರ್ವೋಚ್ಛ ನ್ಯಾಯಾಲಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಸಮುದಾಯಗಳ ಮೀಸಲಾತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆಯೋಗ ರಚನೆ, ವಿಸ್ತೃತ ಅಂಕಿ ಅಂಶಗಳ ಸಹಿತ ವರದಿ ಪಡೆಯುವುದು, ಪ್ರತ್ಯೇಕವಾರು ಹಲವು ಸಮುದಾಯಗಳಿಗೆ ಮೀಸಲಾತಿ ನೀಡುವುದು, ಒಟ್ಟು ಸ್ಥಾನಗಳ ಸಂಖ್ಯೆ ಶೇ.50ರಷ್ಟು ಮೀರದಂತೆ ಮೀಸಲಾತಿ ನಿಗದಿಪಡಿಸಬೇಕು ಎಂಬ ಮಾನದಂಡಗಳನ್ನು ವಿಧಿಸಿತ್ತು. ಆದರೆ ನಮ್ಮ ಯಾವುದೇ ಸರ್ಕಾರಗಳೂ ಇದನ್ನು ಜಾರಿಗೊಳಿಸಿಲ್ಲ” ಎಂದು ಹೇಳಿದರು.

“2020ರಲ್ಲಿ ಒಬಿಸಿ ಮೀಸಲಾತಿ ಬಿಟ್ಟು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಹೊರಟ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಅದು ಮಹಾರಾಷ್ಟ್ರಕ್ಕೆ ಮಾತ್ರ ಮೀಸಲಾಗಿದ್ದ ಸರ್ವೋಚ್ಛ ನ್ಯಾಯಾಲಯದ ನಿಲುವಲ್ಲ. ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆಂದು ಸುಪ್ರೀಂ ಕೋರ್ಟ್‌ ಪುನರುಚ್ಛರಿಸಿತ್ತು” ಎಂದರು.

“ನ್ಯಾ. ಭಕ್ತವತ್ಸಲ ವರದಿಯನ್ನು ಸರ್ಕಾರ ಸ್ವೀಕರಿಸಲೂ ಇಲ್ಲ, ತಿರಸ್ಕರಿಸಲೂ ಇಲ್ಲ. ಹೀಗಾಗಿ ಕರ್ನಾಟಕ ರಾಜ್ಯದ ಅತಿ ಹಿಂದುಳಿದ ಸಮುದಾಯಗಳ ಹಿತಾಸಕ್ತಿಯ ಉದ್ದೇಶದಿಂದ ಸರ್ಕಾರ ಈ ವರದಿಯನ್ನು ಕೂಡಲೇ ಸ್ವೀಕರಿಸಿ ಪರಿಗಣಿಸಬೇಕು. 2011ರಲ್ಲಿ ನಡೆಸಲಾದ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಗಣತಿ ಮತ್ತು ಜಾತಿಗಣತಿ ಇದೆ. ಆದರೆ, ಒಬಿಸಿ ಸಮುದಾಯಗಳಿಗೆ ಕೇವಲ ಜನಗಣತಿ ಮಾತ್ರವಿದೆ. ಆದರೆ ಜಾತಿ ಗಣತಿ ಇಲ್ಲ” ಎಂದು ಹೇಳಿದರು.

“ಕಾಲಕಾಲಕ್ಕೆ ಚುನಾವಣೆ ನಡೆಸಬೇಕಿರುವ ನಿಯಮದಂತೆ ಕಳೆದ 2 ವರ್ಷಗಳಿಂದ ಚುನಾವಣೆ ನಡೆಯದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಬೇಕು ಹಾಗೂ ನ್ಯಾ.ಭಕ್ತವತ್ಸಲ ವರದಿಯನ್ನು ಪರಿಗಣಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿ ನೀಡಬೇಕು. ಭಕ್ತವತ್ಸಲ ವರದಿ ವೈಜ್ಞಾನಿಕವಾಗಿ ಸೂಕ್ತವಲ್ಲದಿದ್ದರೆ ಕಾಂತರಾಜು ವರದಿಯನ್ನು ಪುರಸ್ಕರಿಸಬೇಕು. ಹಿಂದುಳಿದ ಸಮುದಾಯಗಳಿಗೆ ಶಾಸನಸಭೆಯಲ್ಲೂ ಮೀಸಲಾತಿ ದೊರೆಯಬೇಕು” ಎಂದು ನ್ಯಾ. ನಾಗಮೋಹನ್‌ ದಾಸ್‌ ಒತ್ತಾಯಿಸಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ನಿವೃತ್ತ ನ್ಯಾಯಾಧೀಶ ಕಾಂತರಾಜು ಮಾತನಾಡಿ, “ಚುನಾವಣೆ ಮತ್ತು ಮೀಸಲಾತಿ ಎರಡೂ ಸಂವಿಧಾನದ ಮೂಲತತ್ವ. ಇದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಬಂದ ದಶಕಗಳ ಬಳಿಕ ಮಂಡಲ್‌ ಆಯೋಗ ಜಾರಿಯಾದ ನಂತರ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿತ್ತು.

2008ರಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ಸಿಕ್ಕಿತು. ಆದರೆ ಚುನಾವಣೆಗಳಲ್ಲಿ ಮೀಸಲಾತಿ ವ್ಯವಸ್ಥೆ ಇನ್ನೂ ಪರಿಪೂರ್ಣವಾಗಿಲ್ಲ. ಸ್ಥಳೀಯ ಸಂಸ್ಥೆಗಳ ಜೊತೆ ವಿಧಾನಸಭಾ, ವಿಧಾನ ಪರಿಷತ್‌ ಹಾಗೂ ಲೋಕಸಭಾ ಚುನಾವಣೆಗಳಲ್ಲಿಯೂ ಹಿಂದುಳಿದ ಸಮುದಾಯಗಳು ಹಾಗೂ ಅತಿ ಹಿಂದುಳಿದ ಸಮಾಜಗಳಿಗೂ ಮೀಸಲಾತಿ ನೀಡಬೇಕು” ಎಂದು ಒತ್ತಾಯಿಸಿದರು.

“ಒಬಿಸಿ ಮೀಸಲಾತಿ ನೀಡಲು ಅಂಕಿ ಅಂಶಗಳ ಕೊರತೆ ಎಂಬ ಸಬೂಬು ಹೇಳುವಂತಿಲ್ಲ. ಅಶಕ್ತ ಸಮುದಾಯಗಳಿಗೆ ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯತ್ವ ನೀಡಬೇಕು” ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಅತಿ ಹಿಂದುಳಿದ ಜಾಗೃತಿ ವೇದಿಕೆಯ ಅಧ್ಯಕ್ಷ ಎಂ ಸಿ ವೇಣುಗೋಪಾಲ್‌ ಮಾತನಾಡಿ, “₹170 ಕೋಟಿ ವ್ಯಯಿಸಿ ತಯಾರಿಸಿದ ಕಾಂತರಾಜು ವರದಿ ನೆನಗುದಿಗೆ ಬಿದ್ದಿದೆ. 2018ರಿಂದ ನೆನಗುದಿಗೆ ಬಿದ್ದಿರುವ ಕಾಂತರಾಜು ಸಮಿತಿಯ ವರದಿಯನ್ನು ಸ್ವೀಕರಿಸಿ, ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ವಿಧಾನಸಭೆ, ವಿಧಾನ ಪರಿಷತ್‌ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿ ಖಚಿತಪಡಿಸಿ ಅತಿ ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡಬೇಕು” ಎಂದು ಆಗ್ರಹಿಸಿದರು. ‌

“197 ಅತಿ ಹಿಂದುಳಿದ ವರ್ಗಗಳಿಗೆ ಪ್ರವರ್ಗ 1ಎ ನೀಡಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಪ್ರಬಲ ಜಾತಿಗಳ ಎದುರು ಪೈಪೋಟಿ ಮಾಡುವ ಶಕ್ತಿ ಇಲ್ಲ. ಸಂವಿಧಾನದ ರಕ್ಷಣೆಯಲ್ಲಿ ಮೀಸಲಾತಿಯ ಸೌಕರ್ಯ ದೊರಕಿದಾಗ ಮಾತ್ರ ಅಂತಹ ಸಾಮರ್ಥ್ಯ ದೊರೆಯುತ್ತದೆ” ಎಂದು ಅವರು ಹೇಳಿದರು.

ಈ ಸಂವಾದದಲ್ಲಿ ಸವಿತಾ ಸಮಾಜ, ರಾಜು ಕ್ಷತ್ರಿಯ, ತಿಗಳರು, ಈಡಿಗ, ಕುಂಬಾರ, ಕುರುಬ, ಉಪ್ಪಾರ, ಅಲೆಮಾರಿ, ಯಾದವ, ಮಡಿವಾಳ, ಕಾಡುಗೊಲ್ಲ, ತೆಲುಗು ಶೆಟ್ಟಿ, ರಜಪೂತ, ಬಿಲ್ಲವ ಮುಂತಾದ 16ಕ್ಕೂ ಅಧಿಕ ಸಮಾಜಗಳ ಮುಖಂಡರು ಭಾಗವಹಿಸಿದ್ದು ವಿಶೇಷವಾಗಿತ್ತು. ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣ, ನೆ.ಲ ನರೇಂದ್ರ ಬಾಬು, ಮಾಜಿ ಮೇಯರ್‌ ವೆಂಕಟೇಶ ಮೂರ್ತಿ, ಹುಚ್ಚಪ್ಪ, ತುಮಕೂರು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಚಂದ್ರಶೇಖರ್‌ ಗೌಡ, ಹಿರಿಯ ಪತ್ರಕರ್ತ ಲಕ್ಷ್ಮಣ್‌ ಕೊಡಸೆ, ಜಾಗೃತ ವೇದಿಕೆ ಉಪಾಧ್ಯಕ್ಷ ಲಿಂಗಪ್ಪ, ಶಿವು ಯಾದವ್‌, ಅನಂತ್‌ ನಾಯಕ್‌ ಸೇರಿದಂತೆ ಇತರರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!