• Sun. Apr 28th, 2024

PLACE YOUR AD HERE AT LOWEST PRICE

ಉದ್ಯಮಿ ಗೋವಿಂದ ಪೂಜಾರಿ ಎಂಬುವವರಿಗೆ ಬೈಂದೂರು ಕ್ಷೇತ್ರದ ಬಿಜೆಪಿ ಶಾಸಕ ಟಿಕೆಟ್‌ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಈಗಾಗಲೇ ರಾಜ್ಯಾದ್ಯಂತ ಸುದ್ದಿಯಾಗಿರುವ ಬೆನ್ನಲ್ಲೇ, ಕೊಪ್ಪಳ ಜಿಲ್ಲೆಯಲ್ಲೂ ಬಿಜೆಪಿ ಮುಖಂಡನಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗಾಯತ್ರಿ ತಿಮ್ಮಾರೆಡ್ಡಿ ಅವರಿಗೆ ಟಿಕೆಟ್​ ಕೊಡಿಸುವಲ್ಲಿ ಅವರ ಪತಿ ಜಿ‌. ತಿಮ್ಮಾರೆಡ್ಡಿ ಗಿಲ್ಲೆಸೂಗುರ್ ಹಲವು ಪ್ರಯತ್ನ ಮಾಡಿದ್ದರು. ಈ ವೇಳೆ ಟಿಕೆಟ್​ ಕೊಡಿಸುತ್ತೇವೆಂದು ನಂಬಿಸಿ, ಮೂವರು ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೆ ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕನಕಗಿರಿ ಪರಿಶಿಷ್ಟ ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಗಾಯತ್ರಿ ತಿಮ್ಮಾರೆಡ್ಡಿ ಅವರು ಬಿಜೆಪಿ ಟಿಕೆಟ್​ಗಾಗಿ ಪ್ರಯತ್ನಿಸಿದ್ದರು. ಈ ವೇಳೆ ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು, ಗೌರವ್ ಟಿಕೆಟ್ ಕೊಡಿಸುತ್ತೇವೆಂದು ಸುಮಾರು 21 ಲಕ್ಷ ಹಣ ವಂಚನೆ ಮಾಡಿರುವುದಾಗಿ ವರದಿಯಾಗಿದೆ.

ಘಟನೆ ನಡೆದು ಸುಮಾರು 3-4 ತಿಂಗಳುಗಳಾಗಿದ್ದು, ಚೈತ್ರಾ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರಕರಣ ಈಗ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಮೂವರ ವಿರುದ್ಧ ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ ತಿಮ್ಮಾರೆಡ್ಡಿ ಅವರು ಕಳೆದ ಜುಲೈ 19ರಂದು ದೂರು ದಾಖಲಿಸಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ.

ಈ ಬಗ್ಗೆ  ದಿನ.ಕಾಮ್ ಜೊತೆಗೆ ಮಾತನಾಡಿರುವ ಬಿಜೆಪಿ ಮುಖಂಡ ಜಿ‌. ತಿಮ್ಮಾರೆಡ್ಡಿ ಗಿಲ್ಲೆಸೂಗುರ್, “ಈ ಬೆಳವಣಿಗೆ ನಡೆದು ಸುಮಾರು ಮೂರು-ನಾಲ್ಕು ತಿಂಗಳು ಆಗಿದೆ. ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಅಲ್ಲದೇ, ಈ ಬಗ್ಗೆ ಸಂಬಂಧಪಟ್ಟವರ ಜೊತೆಗೆ ಮಾತುಕತೆಯೂ ಆಗಿದೆ. ಚೈತ್ರಾ ಕುಂದಾಪುರ ಅವರ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ನಮ್ಮ ಘಟನೆ ಕೂಡ ಚರ್ಚೆಯಾಗುತ್ತಿರಬಹುದು. ಯಾವುದಕ್ಕೂ ನಾಳೆ(ಸೆ.16) ಸಂಜೆಯೊಳಗೆ ಹಣ ವಾಪಸ್ ನೀಡುವ ಮಾತುಕತೆ ಮುಗಿಯಬಹುದು” ಎಂದು ಮಾಹಿತಿ ನೀಡಿದ್ದಾರೆ.

ಇದೀಗ ಬಿಜೆಪಿ ಹೆಸರಿನಲ್ಲಿ ಟಿಕೆಟ್ ಕೊಡುವ ಭರವಸೆ ನೀಡಿ, ವಂಚಿಸಿರುವ ಇಂತಹ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಚುನಾವಣೆಯ ವೇಳೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಟಿಕೆಟ್​ಗಾಗಿ ಬಹುದೊಡ್ಡ ‘ಡೀಲ್’ಗಳು ನಡೆದಿದೆಯಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹಾಗೂ ಅನುಮಾನಕ್ಕೆ ವೇದಿಕೆಯೊಗಿಸಿದೆ.

ಪ್ರಕರಣದಲ್ಲಿ ಆಗಿದ್ದೇನು?
ಈ ಪ್ರಕರಣದಲ್ಲೂ ಚೈತ್ರಾ ಕುಂದಾಪುರ ಗ್ಯಾಂಗ್ ರೀತಿಯಲ್ಲೇ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.

ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು, ಗೌರವ್ ಎಂಬುವರಿಂದ ವಂಚನೆ ನಡೆದಿದೆ. ಸುಮಾರು 21 ಲಕ್ಷ ರೂಪಾಯಿ ಹಣ ಪಂಗನಾಮ ಹಾಕಿರುವುದಾಗಿ ವರದಿಯಾಗಿದೆ.

‘ತಮಗೆ ಅಮಿತ್ ಶಾ ಪರಿಚಯವಿದೆ. ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತಿದ್ದೇವೆ. ಅದರಲ್ಲಿ ನಿಮ್ಮ ಪತ್ನಿಯ ಹೆಸರು ಮುಂಚೂಣಿಗೆ ತರುತ್ತೇವೆ’ ಎಂದು ವಂಚಕರು ಯಾಮಾರಿಸಿದ್ದಾರೆ.

ತಾನು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಮುಖ್ಯಸ್ಥನೆಂದು ಪರಿಚಯಿಸಿಕೊಂಡಿದ್ದ ವಿಶಾಲ್ ನಾಗ್‌ನನ್ನು ನಂಬಿ ಆಕಾಂಕ್ಷಿಯ ಪತಿ ತಿಮ್ಮಾರೆಡ್ಡಿ, ಬ್ಯಾಂಕ್ ಖಾತೆಗೆ 19 ಲಕ್ಷ ಹಾಗೂ ನಗದು ರೂಪದಲ್ಲಿ ಎರಡು ಲಕ್ಷ ರೂಪಾಯಿ ನೀಡಿದ್ದಾರೆ. ಕೊನೆಗೆ ಟಿಕೆಟ್ ಸಿಗದೇ ಹಣವೂ ವಾಪಸ್ ಬಾರದ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!