• Sun. Apr 28th, 2024

PLACE YOUR AD HERE AT LOWEST PRICE

-ಕೆ.ರಾಮಮೂರ್ತಿ.

ಬಂಗಾರಪೇಟೆ:ರಾಜ್ಯ ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದಾದ ಫವತಿ ಖಾತೆ ಆಂದೋನ ಯೋಜನೆ ಇಂದು ಎಲ್ಲಾ ಹೋಬಳಿಗಳ ಮಟ್ಟದಲ್ಲಿ ಆರಂಭಗೊಂಡಿತಾದರೂ ಈ ಬಗ್ಗೆ ವ್ಯಾಪಕ ಪ್ರಚಾರವಿಲ್ಲದ ಕಾರಣ  ಮತ್ತು ಕಾಲಾವಕಾಶ ಕಡಿಮೆ ಇದ್ದ ಕಾರಣ ಸಾರ್ವಜನಿಕರಿಂದ ನಿರೀಕ್ಷಕಿತ ಮಟ್ಟದಲ್ಲಿ ಅರ್ಜಿಗಳು ಬಂದಿಲ್ಲ ಎನ್ನಲಾಗಿದ್ದು, ಕಾಮಸಮುದ್ರ ಹೋಬಳಿಯಲ್ಲಿ ಕಾರ್ಯಕ್ರಮವನ್ನೇ ಮಾಡದೆ ನಿರ್ಲಕ್ಷಿಸಿರುವ ಘಟನೆ ನಡೆದಿದೆ.

ಕುಟುಂಬದ ಯಜಮಾನರು ತೀರಿಕೊಂಡ ನಂತರ ಅವರ ಹೆಸರಿನಲ್ಲಿರುವ ಆಸ್ತಿಯು ಮಕ್ಕಳಿಗೆ, ಮೊಮ್ಮೊಕ್ಕಳಿಗೆ ಅಥವಾ ವಾರಸುದಾರರಿಗೆ ಖಾತೆ ವರ್ಗಾವಣೆಯಾಗದೆ ಸರ್ಕಾರದ ಸೌಲತ್ತುಗಳನ್ನು ಪಡೆಯಲು ಆಗುತ್ತಿರಲಿಲ್ಲ. ಈ ಸಮಸ್ಯಯು ಅನೇಕ ವರ್ಷಗಳಿಂದ ಮುಂದುವರೆದುಕೊಂಡು ಬರುತ್ತಿದ್ದು ರೈತರಿಗೆ ತೊಂದರೆಯಾಗಿತ್ತು.

ಇದನ್ನು ಮನಗಂಡ ಸರ್ಕಾರ ಕಾಲಮಿತಿಯಲ್ಲಿ  ಇಡೀ ರಾಜ್ಯದಲ್ಲಿನ ಫವತಿ ವಾರಸು ಖಾತೆ ಸಮಸ್ಯಯನ್ನು ಬಗೆಹರಿಸುವ ಉದ್ಧೇಶದಿಂದ ಹೋಬಳಿ ಮಟ್ಟದಲ್ಲಿ ಫವತಿ ಖಾತೆ ಆಂದೋಲನ ಎಂಬ ಯೋಜನೆಯನ್ನು ರೂಪಿಸಿತು. ಅದರಂತೆ ತಾಲ್ಲೂಕಿನ ಎಲ್ಲಾ ಹೋಬಳಿಗಳ ಮಟ್ಟದಲ್ಲಿ ದಿನಾಂಕ 02-01-2024ರಿಂದ ಆಂದೋಲನ ನಡೆಸಲು ಜಿಲ್ಲಾಧಿಕಾರಿಗಳು ಆದೇಶ ಮಾಡಿದರು.

 

ಇಂದು ಜಿಲ್ಲಾಧಿಕಾರಿಗಳ ಆದೇಶದಂತೆ ಹೋಬಳಿ ಮಟ್ಟದಲ್ಲಿ ಫವತಿ ಖಾತೆ ಆಂದೋಲನ ನಡೆಯಿತಾದರೂ ವ್ಯಾಪಕ ಪ್ರಚಾರವಿಲ್ಲದೆ ಇರುವುದು, ಅಧಿಕಾರಿಗಳ ನಿರ್ಲಕ್ಷ್ಯತೆ ಸೇರಿದಂತೆ ನಾನಾ ಕಾರಣಗಳಿಂದ ಕಾರ್ಯಕ್ರಮ ಬಹುತೇಕ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಾಮಸಮುದ್ರ ಹೋಬಳಿಯಲ್ಲಿ ಕಾರ್ಯಕ್ರಮವನ್ನೇ ಮಾಡದೆ ನಿರ್ಲಕ್ಷಿಸಲಾಗಿದೆ.

ಕಾರ್ಯಕ್ರಮದ ಬಗ್ಗೆ ಕರಪತ್ರಗಳನ್ನು ಮುದ್ರಿಸಿದ್ದು, ಅವು ವಾಟ್ಸಾಪ್ ನಲ್ಲಿ ಮಾತ್ರ ಕಲವರನ್ನು ತಲುಪಿವೆ. ಸಾರ್ವಜನಿಕರಿಗೆ ಹಂಚಿಕೆಯಾಗಿಲ್ಲ. ಕಾರ್ಯಕ್ರಮದ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನವನ್ನು ಅಧಿಕಾರಿ ಸಿಬ್ಬಂದಿವರ್ಗ ಮಾಡದೆ ಕಾರ್ಯಕ್ರಮ ವಿಫಲವಾಗಲು ಕಾರಣಕರ್ತರಾಗಿದ್ದಾರೆ ಎಂದು ಸಾರ್ಜನಿಕರು ಆರೋಪಿಸಿದ್ದಾರೆ.

ಕೆಲವರಿಗೆ ಮಾತ್ರ ತಲುಪಿರುವ ಕರಪತ್ರದಲ್ಲಿರುವಂತೆ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಮತ್ತು ಗ್ರೇಡ್-2 ತಹಶೀಲ್ದಾರರ ನೇತೃತ್ವದಲ್ಲಿ ಫವತಿ ಖಾತೆ ಯೋಜನೆ ಕಾರ್ಯಕ್ರಮ ನಡೆಯಲಿದೆ ಎಂದಿದೆಯಾದರೂ ಅವರಾರೂ ಭಾಗವಹಿಸಿಲ್ಲ. ಜೊತೆಗೆ ಸಂಬಂಧಪಟ್ಟ ಉಪ ತಹಶೀಲ್ದಾರರು ಮತ್ತು ರಾಜಸ್ವ ನಿರೀಕ್ಷಕರು ಸಹ ಕಾರ್ಯಕ್ರಮ ಆರಂಭದಲ್ಲಿ ಹಾಜರಿರದ ಬಗ್ಗೆ ಆರೋಪಿಸಲಾಗಿದೆ.

ಇನ್ನ ಕಸಬಾ ಹೋಬಳಿಯ ದೊಡ್ಡವಲಗಮಾದಿಯ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಹೋಬಳಿ ಮಟ್ಟದ ಫವತಿ ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ದೊಡ್ಡವಲಗಮಾದಿ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಶ್ವೇತ ಆರ್.ಎಸ್ ಒಬ್ಬರು ಮಾತ್ರ ಭಾಗವಹಿಸಿದ್ದರು. ಬೆರಳೆಣಿಯಷ್ಟು ಕೇವಲ 8 ಜನರು ಮಾತ್ರ ತಮ್ಮ ಅರ್ಜಿಗಳನ್ನು ನೀಡಿದ್ದಾರೆ.

ಬೂದಿಕೋಟೆಯಲ್ಲಿನ ನಾಡ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಮಂಜುನಾಥ್ ಭಾಗವಹಿಸಿದ್ದರು. ಗ್ರಾಮ ಲೆಕ್ಕಿಗರಾದ ವಿನೋದ್, ಮಹೇಶ್, ಅಮರೇಶ್ ಮಾತ್ರ ಹಾಜರಿದ್ದರು. ಕೇವಲ 15 ಅರ್ಜಿಗಳು ನೀಡಿದ್ದಾರೆ. ಅಲ್ಲೂ ಕರಪತ್ರದಲ್ಲಿ ಜಿಲ್ಲಾಧಿಕಾರಿಗಳ ಸಹಿತ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳು ತಹಶೀಲ್ದಾರರು ಎಂದು ಮುಸದ್ರಿಸಲಾಗಿತ್ತಾದರೂ ಅವರ್ಯಾರೂ ಬಂದಿಲ್ಲ. ಜೊತೆಗೆ ಕಾರ್ಯಕ್ರಮ ಆರಂಭವಾದಾಗ ಉಪ ತಹಶೀಲ್ದಾರರು ಮತ್ತು ರಾಜಸ್ವಿ ನಿರೀಕ್ಷಕರೂ ಇರಲಿಲ್ಲ ಎಂದು ಆರೋಪಿಸಲಾಗಿದೆ.

ಯಾವುದೇ ಯೋಜನೆ ಸಮರ್ಪಕವಾಗಿ ಜನತೆಗೆ ತಲುಪಬೇಕಾದರೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇರಬೇಕು. ಅವರಿಗೆ ಜನತೆಯ ಮೇಲೆ ಗೌರವವಿದ್ದರೆ ಯೋಜನೆ ಎಲ್ಲರಿಗೂ ತಲುಪುತ್ತದೆ. ಜನರ ಮೇಲೆ ಅಧಿಕಾರಿಗಳಿಗೆ ಅಕ್ಕರೆ ಇಲ್ಲದಿದ್ದರೆ ಸರ್ಕಾರ ಎಷ್ಟು ಯೋಜನೆಗಳನ್ನು ರೂಪಿಸಿದರೂ ಇದೇ ರೀತಿ ವಿಫಲವಾಗುತ್ತವೆ ಎಂಬ ಅಭಿಪ್ರಯಾವಿದೆ. ಕಸಬಾ ಮತ್ತು ಬೂದಿಕೋಟೆ ರಾಜಸ್ವ ನಿರೀಕ್ಷಕರು ತಡವಾಗಿ ಕಾರ್ಯಕ್ರದಲ್ಲಿ ಭಾಗವಹಿಸದರು ಎಂದು ತಿಳಿದುಬಂದಿರುತ್ತದೆ.

ಸರ್ಕಾರ ಜನರ ಸಮಸ್ಯೆ ಬಗೆಹರಿಸಲು ಅಧ್ಯಯನ ಮಾಡಿ ಯೋಜನೆಗಳನ್ನು ರೂಪಿಸುತ್ತದೆ. ಅದನ್ನು ಜಾರಿ ಮಾಡುವ ಅಧಿಕಾರಿಗಳು ಇಚ್ಛಾಶಕ್ತಿ ಇಲ್ಲದೆ ನಿರ್ಲಕ್ಷಿಸಿ ಯೋಜನೆಯ ಉದ್ಧೇಶವನ್ನೇ ವಿಫಲಗೊಳಿಸುತ್ತಾರೆ. ಪದೇ ಪದೇ  ಈ ರೀತ ಆಗಿ ಜನರಿಗೆ ಮೋಸವಾಗುತ್ತಿದ್ದರೂ ಮೇಲಧಿಕಾರಿಗಳು ಕ್ರಮಕ್ಕೆ ಮುಂದಾಗಿದೆ ಇರುವುದೇ ಯೋಜನೆಗಳು ಹಳ್ಳ ಹಿಡಿಯುವಂತಾಗಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

……………………………………..

ದೊಡ್ಡವಲಗಮಾದಿ ಗ್ರಾಮದಲ್ಲಿ ಹೋಬಳಿ ಮಟ್ಟದ ಫವತಿ ಖಾತೆ ಆಂದೋಲನ ನಡೆಯುವ ಬಗ್ಗೆ ವ್ಯಾಪಕ ಪ್ರಚಾರವಿಲ್ಲ. ನಾನೊಬ್ಬ ಜವಾಬ್ದಾರಿಯುತ ಗ್ರಾಮ ಪಂಚಾಯಿತಿ  ಸಧ್ಯಸ್ಯನಾಗಿದ್ದು ಇದೇ ಗ್ರಾಮದವನಾಗಿದ್ದು ನನಗೇ ನೆನ್ನೆ ಸಂಜೆ ಕರಪತ್ರ ವಾಟ್ಸಾಪ್ ನಲ್ಲಿ ಕಳಿಸಿದ್ದಾರೆ. ಎಲ್ಲೂ ಕರಪತ್ರ ಹಂಚಿಲ್ಲ. ಪ್ರಚಾರ ಮಾಡಿಲ್ಲ. ಆದ ಕಾರಣ ಯೋಜನೆಯ ಫಲ ಪಡೆಯಲು ಜನತೆಗೆ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳು ಮತ್ತೇ ಈ ಕಾರ್ಯಕ್ರಮ ನಮ್ಮ ಗ್ರಾಮದಲ್ಲಿ ಸಮರ್ಪಕವಾಗಿ ನಡೆಯುವಂತೆ ಮಾಡಬೇಕು.

ಆಲೀಂ ಖಾನ್. ಗ್ರಾಂಪಂ ಸಧಸ್ಯ, ದೊಡ್ಡವಲಗಮಾದಿ.

…………………………………….

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸ್ಥಳೀಯ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ವ್ಯಾಪಕ ಪ್ರಚಾರ ಮತ್ತು ಕಾಲಾವಕಾಶ ಕಡಿಮೆ ಕಾರಣದಿಂದ ಯೋಜನೆಯ ಉಪಯೋಗ ಪಡೆಯುವಲ್ಲಿ ಅನೇಕರು ವಂಚಿತರಾಗುತ್ತಿದ್ದಾರೆ. ಫವತಿ ಖಾತೆ ಆಂದೋಲನ ವಿಫಲವಾಗಲು ಕಾರಣರಾದವರ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಲಿ.

ಅಮರೇಶ್.ಎನ್. ಗ್ರಾಪಂ ಸಧಸ್ಯರು, ಹಿರೇಕರಪನಹಳ್ಳಿ.

…………………………………………

ಕದಿರಿನತ್ತ ಗ್ರಾಮದ ಸ್ಮಶಾನ ಸಮಸ್ಯೆ ಬಗೆಹರಿಸಲು ತಾಲ್ಲೂಕು ಕಛೇರಿಯಲ್ಲಿ ಖಡತ ಹುಡುಕುತ್ತಿದ್ದೇನೆ. ಕಾರ್ಯಕ್ರಮ ಮಾಡಲು ಪ್ರಚಾರಕ್ಕೆ ಸಮಯಾವಕಾಶ ಬೇಕು ಎಂದು ಗ್ರಾಮ ಲೆಕ್ಕಿಗರು ಮತ್ತು ನಾನು ತಹಶೀಲ್ದಾರರ ಬಳಿ ಮೌಕಿಕವಾಗಿ ಕೇಳಿದ್ದೇವೆ. ಈ ಕಾರಣದಿಂದ ಇಂದು ಕಾಮಸಮುದ್ರ ಹೋಬಳಿಯಲ್ಲಿ ಫವತಿ ಖಾತೆ ಆಂದೋಲನ ಕಾರ್ಯಕ್ರಮ ಮಾಡಿರುವುದಿಲ್ಲ. ವ್ಯಾಪಕ ಪ್ರಚಾರ ಮಾಡಿ ಜನವರಿ 4ರಂದು ಜಾನಗುಟ್ಟೆ ಗ್ರಾಮದಲ್ಲಿ ಕಾರ್ಯಕ್ರಮ ಮಾಡುತ್ತೇವೆ.

ಶ್ರೀನಿವಾಸ್. ರಾಜಸ್ವ ನಿರೀಕ್ಷಕರು, ಕಾಮಸಮುದ್ರ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!