• Wed. May 8th, 2024

PLACE YOUR AD HERE AT LOWEST PRICE

ಕೆಜಿಎಫ್:ಕೆಜಿಎಫ್‌ನಲ್ಲಿ ಕೆಎಸ್‌ಆರ್‌ಪಿ ತರಬೇತಿ ಶಾಲೆಯನ್ನು ತೆರೆಯುವಂತೆ ಐಜಿಪಿ ಮತ್ತು ಎಸ್‌ಪಿ ಮನವಿ ಸಲ್ಲಿಸಿದ್ದು, ತರಬೇತಿ ಶಾಲೆಗೆ ಅಗತ್ಯವಾದ ಉತ್ತಮವಾದ ವಾತಾವರಣ ಇರುವುದರಿಂದ ಸುಮಾರು ೫೦೦ ಕೋಟಿ ರೂ ವೆಚ್ಚದಲ್ಲಿ ತರಬೇತಿ ಶಾಲೆಯನ್ನು ತೆರೆಯುವುದರ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಅವರು ನಗರದ ಛಾಂಪಿಯನ್ ರೀಫ್ಸ್ ನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ಮಾತನಾಡಿ, ಒಂದು ಬೆಟಾಲಿಯನ್ ತರಬೇತಿ ಶಾಲೆಯನ್ನು ತೆರೆದಲ್ಲಿ ಒಂದು ಸಾವಿರ ಮಂದಿಗೆ ತರಬೇತಿಯನ್ನು ನೀಡಬಹುದಾಗಿದ್ದು, ತರಬೇತಿ ಶಾಲೆಯನ್ನು ತೆರೆಯಲು ಎಲ್ಲ ರೀತಿಯ ಸೌಕರ್ಯಗಳು ಕೆಜಿಎಫ್‌ನಲ್ಲಿ ಲಭ್ಯವಿರುವುದರಿಂದ ಇದರ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಸ ಹೊಸ ಬದಲಾವಣೆಗಳನ್ನು ಜಾರಿಗೊಳಿಸುತ್ತಿದ್ದು, ಅವುಗಳನ್ನು ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಯಾವ ರೀತಿ ಕಾರ್ಯಗತಗೊಳಿಸಬಹುದು, ಕೆಜಿಎಫ್‌ನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದು ಮತ್ತು ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಇರುವಂತಹ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.

ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದಾಗ ಕೆಜಿಎಫ್ ತನ್ನದೇ ಆದಂತಹ ಬಹುದೊಡ್ಡ ಇತಿಹಾಸವನ್ನು ಹೊಂದಿರುವುದರಿಂದ ಕೆಜಿಎಫ್ ನ್ನು ಪ್ರವಾಸಿ ತಾಣವನ್ನಾಗಿಸಲು ಒಂದು ಪ್ರಸ್ತಾವನೆಯನ್ನು ತಯಾರಿಸಿ ಸಮಗ್ರವಾದ ಡಿಪಿಎಆರ್‌ನ್ನು ಮಾಡಿ ಸರ್ಕಾರಕ್ಕೆ ಕಳುಹಿಸಿದಲ್ಲಿ ಅಧಿವೇಶನದಲ್ಲಿ ಅದರ ಬಗ್ಗೆ ಗಮನ ಸೆಳೆದು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಬಹುದೊಡ್ಡ ಇತಿಹಾಸವನ್ನು ಹೊಂದಿರುವ ದೇಶದ ಮತ್ತು ರಾಜ್ಯದ ಕೆಲವೇ ಕೆಲವು ಸ್ಥಳಗಳ ಸಾಲಿನಲ್ಲಿ ಕೆಜಿಎಫ್ ನಿಲ್ಲುತ್ತದೆ. ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಅದಕ್ಕಿಂತ ಹಿಂದಿನ ಇತಿಹಾಸವನ್ನು ನೋಡಿದಾಗ ವಿಜಯನಗರದ ಶ್ರೀಕೃಷ್ಣದೇವರಾಯರ  ಕಾಲದಿಂದಲೂ ಚಿನ್ನದ ನಿಕ್ಷೇಪಗಳು ಇಲ್ಲಿ ದೊರೆತಿರುವ ಕುರುಹುಗಳು ಇರುವುದರಿಂದ, ಸಂಪುಟದಲ್ಲಿ ಚರ್ಚೆ ನಡೆಸಿ ಸಂಪೂರ್ಣವಾಗಿ ಸರ್ಕಾರದ ವತಿಯಿಂದ ಇಲ್ಲವೇ ಪಿಪಿಪಿ ಮಾದರಿಯಲ್ಲಿ ಕೆಜಿಎಫ್‌ನ್ನು ಪ್ರವಾಸಿ ತಾಣವನ್ನಾಗಿಸಲು ಕ್ರಮ ಕೈಗೊಳ್ಳಲಾಗುವುದು.

ನಮ್ಮ ಕಾಲಘಟ್ಟಕ್ಕೆ ಕೆಜಿಎಫ್‌ನ ಗತವೈಭವದ ಬಗ್ಗೆ ಸುಮಾರು ಶೇ ೫-೧೦ ರಷ್ಟು ವಿಷಯಗಳು ಮಾತ್ರ ತಿಳಿದಿದ್ದು, ನಮ್ಮ ಮುಂದಿನ ಪೀಳಿಗೆಗೆ ಅದು ಶೂನ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಕೆಜಿಎಫ್‌ನ್ನು ಪ್ರವಾಸಿ ತಾಣವನ್ನಾಗಿ ಮಾಡಿ, ಇತಿಹಾಸವನ್ನು ಉಳಿಸುವುದಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.

ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಮತ್ತು ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲು ಆಗಿಂದ್ದಾಗ್ಗೆ ನಡೆಯುವ ಎಲ್ಲ ಅಪರಾಧ ಪ್ರಕರಣಗಳನ್ನು ನೊಂದಣಿ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಅಲ್ಲದೇ ರಾಜ್ಯಾದ್ಯಂತ ೪೬ ಸೈಬರ್ ಕ್ರೈಂ  ಪೊಲೀಸ್ ಠಾಣೆಗಳನ್ನು ತೆರೆಯಲಾಗಿದ್ದು, ನೊಂದವರಿಗೆ ತ್ವರಿತವಾಗಿ ನ್ಯಾಯವನ್ನು ಒದಗಿಸುವ ಕಾರ್ಯವನ್ನು ಇಲಾಖೆ ವತಿಯಿಂದ ಮಾಡಲಾಗುತ್ತಿದೆ.

ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ನೂತನವಾಗಿ ಸಂಚಾರಿ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಿದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಕೆಜಿಎಫ್ ಜಿಲ್ಲೆಯಲ್ಲಿ ಈಗಾಗಲೇ ೮ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿದ್ದು, ಅಗತ್ಯಬಿದ್ದರೆ ಮಂಜೂರು ಮಾಡುವುದಾಗಿ ತಿಳಿಸಿದರು.

ಪ್ರಸ್ತುತ ಬೀಟ್ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಗಸ್ತು ಮುಗಿಸಿ ಮೊಬೈಲ್‌ನಲ್ಲಿ ಒಂದು ಗುಂಡಿಯನ್ನು ಒತ್ತು ವಾಪಸ್ಸಾಗಿ, ಬಳಿಕ ಮೌಖಿಕವಾಗಿ ಹಿರಿಯ ಅಧಿಕಾರಿಗಳಿಗೆ ವರದಿ ಮಾಡುತ್ತಿದ್ದು, ಇನ್ನು ಮುಂದೆ ಗಸ್ತು ಪೊಲೀಸರು ಭೇಟಿ ನೀಡಿದ ಸ್ಥಳದಲ್ಲಿ ಏನಾದರೂ ಅಹಿತಕರ ಘಟನೆಗಳು ಸಂಭವಿಸಿದ್ದಲ್ಲಿ, ಕೂಡಲೇ ಠಾಣೆಗೆ ಹಾಜರಾಗಿ ಅಂದಿನ ಡೈರಿಯಲ್ಲಿ ಸಮಗ್ರವಾಗಿ ವರದಿ ಮಾಡುವಂತೆ ಸಲಹೆ ನೀಡಿದರು.

ಅಲ್ಲದೇ ನೂತನವಾಗಿ ಒಂದು ಪೊಲೀಸ್ ಠಾಣೆಯನ್ನು ತೆರೆಯಬೇಕಾದಲ್ಲಿ ವಾರ್ಷಿಕವಾಗಿ ೩೦೦ ಕ್ಕಿಂತ ಹೆಚ್ಚಿನ ಅಪರಾಧ ಪ್ರಕರಣಗಳು ದಾಖಲಾಗಬೇಕಾಗಿರುವುದರಿಂದ ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿ ಹೆಚ್ಚುವರಿ ಪೊಲೀಸ್ ಠಾಣೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಪರಿಶೀಲಿಸಿ ಕ್ರಮ ವಹಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ಬಳಿಕ ಉರಿಗಾಂ ಪೊಲೀಸ್ ಠಾಣೆಗೆ ಭೇಟಿ ನೀಡಿ ಗೌರವ ವಂದನೆ ಸ್ವೀಕರಿಸಿ, ರಾಬರ್ಟ್ಸನ್‌ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಉಗ್ರಾಣ ಮತ್ತು ಬೀಟ್ ಪುಸ್ತಕ ಮತ್ತಿತರ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು.

ಶಾಸಕಿ ಡಾ.ರೂಪಕಲಾ ಎಂ ಶಶಿಧರ್, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಐಜಿಪಿ ರವಿಕಾಂತೇಗೌಡ, ಜಿಲ್ಲಾಧಿಕಾರಿ ಅಕ್ರಂ ಪಾಷಾ, ಎಸ್‌ಪಿ ಕೆ.ಎನ್.ಶಾಂತರಾಜು, ಡಿವೈಎಸ್‌ಪಿ ಪಾಂಡುರಂಗ, ಸಿಪಿಐಗಳಾದ ಆರ್.ದಯಾನಂದ, ಮಾರ್ಕೊಂಡಯ್ಯ, ನವೀನ್ ಸೇರಿದಂತೆ ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!