• Tue. May 21st, 2024

PLACE YOUR AD HERE AT LOWEST PRICE

ಕೋಲಾರ:ಯುವಕ ಯುವತಿಯರು ಈ ದೇಶದ ಬಹು ದೊಡ್ಡ ಆಸ್ತಿ. ಅವರನ್ನು ಸರಿದಾರಿಗೆ ನಡೆಸಿಕೊಂಡು ಹೋಗಬೇಕಾದ್ದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ. ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯ ಮಾಡುವುದು ಸರ್ಕಾರದ ಪ್ರಮುಖ ಗುರಿ ಎಂದು ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ  ತಿಳಿಸಿದರು.

ಇಂದು ಬಂಗಾರಪೇಟೆ ತಾಲ್ಲೂಕಿನ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬೂದಿಕೋಟೆ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಹೊಸ ಸರ್ಕಾರ ಬಂದ ನಂತರ ಕೋಲಾರ ಹಾಗೂ ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪ್ರಗತಿ ಪರಿಶೀಲನೆ ನಡೆಸಲು ನಿನ್ನೆ ತೀರ್ಮಾನ ಕೈಗೊಳ್ಳಲಾಯಿತು. ಇದರ ಭಾಗವಾಗಿ ಇಂದು ಬೂದಿಕೋಟೆ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಲಾಗುತ್ತಿದೆ.

ಈ ಹಿಂದೆ ಕೆಜಿಎಫ್ ಪೊಲೀಸ್ ಜಿಲ್ಲಾ ವ್ಯಾಪ್ತಿಯ ಮಾರಿಕುಪ್ಪಂ ಠಾಣೆಯನ್ನು ಇತ್ತೀಚೆಗೆ ಇತಿಹಾಸ ಪ್ರಸಿದ್ಧ ಬೂದಿಕೋಟೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಇದೆ. ಈ ಭಾಗದ ಜನ ಕಾನೂನು ಪಾಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಸಂತೋಷವಾಯಿತು ಎಂದು ಶ್ಲಾಘಿಸಿದರು.

ಕೋಲಾರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ಕೆಲವೇ ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಲಾಗುತ್ತಿದ್ದು, ಇದು ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ. ಪೊಲೀಸರು ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈವರೆಗೆ ಅವರು ವಾಸ ಮಾಡುವ ವಸತಿ ಗೃಹಗಳು ಸಹ ಅಷ್ಟೇನು ಚೆನ್ನಾಗಿರಲಿಲ್ಲ. ಇದನ್ನು ಗಮನಿಸಿದ ನಾನು ಮೊದಲ ಬಾರಿಗೆ ಗೃಹಮಂತ್ರಿ ಆಗಿದ್ದಾಗ ಹತ್ತು ಸಾವಿರ ಮನೆಗಳನ್ನು ಮಂಜೂರು ಮಾಡಿದೆ.

ಈಗಲೂ ಇನ್ನಷ್ಟು ವಸತಿ ಗೃಹಗಳು ನಿರ್ಮಾಣ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಗೂ ಕ್ವಾರ್ಟರ್ಸ್ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೂದಿಕೋಟೆಗೆ ಇಪ್ಪತ್ತ ನಾಲ್ಕು ವಸತಿ ಗೃಹಗಳು ಹಾಗೂ ಕೆಜಿಎಫ್ ಪೊಲೀಸ್ ಜಿಲ್ಲೆಗೂ ಸಹ ವಸತಿ ಗೃಹಗಳನ್ನು ಮಂಜೂರು ಮಾಡಲಾಗುವುದು ಎಂದರು.

ಪೊಲೀಸ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದಿದ್ದರೆ, ಸರ್ಕಾರ ಜವಾಬ್ದಾರಿ ಆಗುತ್ತದೆ. ಅದರಲ್ಲೂ ಗೃಹ ಸಚಿವರು ಹೊಣೆಗಾರಿಕೆ ಹೊರಬೇಕಾಗುತ್ತದೆ. ಕರ್ನಾಟಕ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಕಳೆದ ವರ್ಷದಲ್ಲಿ ರಾಜ್ಯದಲ್ಲಿ ನೂರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದರು.

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಡಾ.ಪರಮೇಶ್ವರರವರು  ಮುಖ್ಯಮಂತ್ರಿ ಆಗುತ್ತಾರೆ ಎಂಬ ಆಸೆಯಿತ್ತು, ಈಗಲೂ ಸಮಯವಿದೆ ಅವರು ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಇದೆ. ನಮ್ಮ ಕೋರಿಕೆಯ ಮೇರೆಗೆ ಬೂದಿಕೋಟೆ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣ ಮಾಡಿ ಇಂದು ಲೋಕಾರ್ಪಣೆ ಮಾಡಿದ್ದಾರೆ.

ಈ ಹಿಂದೆ ಗೃಹಮಂತ್ರಿ ಆಗಿದ್ದಾಗ ಪೊಲೀಸ್ ವಸತಿ ನಿಲಯಗಳ ನಿರ್ಮಾಣ ಮಾಡಿದ್ದರು, ಈಗಲೂ ಸಿಬ್ಬಂದಿಯ ಕೊರತೆ ಇದೆ, ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುವ ಪೊಲೀಸರಿಗೆ ವಸತಿ ಸಮುಚ್ಚಯ ನಿರ್ಮಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಜಿಎಫ್ ಶಾಸಕಿ ಡಾ.ರೂಪಕಲಾ ಎಂ ಶಶಿಧರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಕರ್ನಾಟಕ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಕರ್ಯಗಳ ನಿಗಮದ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಡಿಜಿಪಿ ಡಾ.ಕೆ.ರಾಮಚಂದ್ರರಾವ್, ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಡಿ.ವೈ.ಎಸ್.ಪಿ ಪಾಂಡುರಂಗ, ಬಂಗಾರಪೇಟೆ ತಹಶೀಲ್ದಾರ್ ರಶ್ಮಿ, ವೃತ್ತ ನಿರೀಕ್ಷಕ ನಾರಾಯಣಸ್ವಾಮಿ, ಆರಕ್ಷಕ ನಿರೀಕ್ಷಕ ಸುನೀಲ್ ಐರೋಡಗಿ, ಬೂದಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್  ಮೊದಲಾದವರು ಉಪಸ್ಥಿತರಿದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!