• Sun. Apr 28th, 2024

PLACE YOUR AD HERE AT LOWEST PRICE

 

ಕೋಲಾರ,ಜ.೩೦: ಮನುಷ್ಯನಲ್ಲಿ ಬದಲಾವಣೆ ಎನ್ನುವುದು ನೈಸರ್ಗಿಕವಾದದ್ದು, ಶಾಲೆ ಜೀವನ ಮೌಲ್ಯಗಳನ್ನು ಕಲಿಸುವ ಸಮಾಜದ ಪ್ರಮುಖ ಘಟಕವಾಗಿದ್ದು, ಶಿಕ್ಷಕರಿಗೆ ಶಾಲೆಯೇ ಕರ್ಮಭೂಮಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ತಿಪ್ಪಾರೆಡ್ಡಿ ಅಭಿಮತ ವ್ಯಕ್ತಪಡಿಸಿದರು.

ತಾಲ್ಲೂಕಿನ ಮದನಹಳ್ಳಿ ಕ್ರಾಸ್ ನಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೧೯೯೧ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಓದಿದ ಹಳೇ ವಿದ್ಯಾರ್ಥಿಗಳ ಸ್ನೇಹ ಸೇತುವೆ ಬಳಗ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಕರ ವೃತ್ತಿ ಬಹಳ ಶ್ರೇಷ್ಠ. ಮಕ್ಕಳನ್ನು ಸಮಾಜದ ಜವಾಬ್ದಾರಿಯುತವಾದ ಪ್ರಜೆಯಾಗಿ ಬೆಳೆಸಲು ಪೊಷಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ನಾವು ಶಿಕ್ಷಕರಾಗಿದ್ದಾಗ ಪೋಷಕರ ಬೆಂಬಲ ಚೆನ್ನಾಗಿತ್ತು. ಇಂದು ಮಕ್ಕಳ ಕೈಯಲ್ಲಿ ಒಂದು ಕಾಗದದ ಚೂರು ತೆಗೆಸಿದರು ಎಂಬ ಕಾರಣಕ್ಕೆ ಸುಮಾರು ಶಿಕ್ಷಕರು ಜೈಲು ಸೇರಿದ್ದೂ ಇದೆ ಎಂದು ವಿಷಾದಿಸಿದರು.

ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಸಾಧಿಸಿದ್ದೇವೆ. ಆದರೆ ಅದನ್ನು ಒಳ್ಳೆಯದಕ್ಕೆ ಬಳಸಬೇಕು, ಆದರೆ, ಮೊಬೈಲ್ ನಿಂದ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಕುಸಿಯುತ್ತಿದೆ. ನಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರ ಇಟ್ಟರೆ ಮಾತ್ರ ಉತ್ತಮ ಪ್ರಜೆಗಳಾಗಿ ಬೆಳೆಯಬಲ್ಲರು ಎಂದು ಅಭಿಪ್ರಾಯಪಟ್ಟರು.

ಮದನಹಳ್ಳಿ ಕ್ರಾಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಿಜಯಾನಂದ ಸಹ ತಾನು ಪಾಠ ಕಲಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಒಬ್ಬರು, ಅವರು ಶಿಕ್ಷಕರಾಗಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ಪ್ರೀತಿಯ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿದ ಶಿಕ್ಷಕರಲ್ಲಿ ಆನಂದಕ್ಕೆ ಪಾರವೇ ಇರಲಿಲ್ಲ. ತಮ್ಮ ವಿದ್ಯಾರ್ಥಿಗಳು ನಿವೃತ್ತಿ ಹಂತದಲ್ಲಿದ್ದರು ತಮ್ಮ ಮುದ್ದಿನ ವಿದ್ಯಾರ್ಥಿ ಮಕ್ಕಳೇ ನಮ್ಮೊಂದಿಗೆ ಇದ್ದಾರೆ ಎನ್ನುವುದು ಅವರ ಮುಖಭಾವದಲ್ಲಿ ಕಂಡು ಬರುತ್ತಿತ್ತು.

ಹಿಂದಿ ಮೆಷ್ಟ್ರು ನಾರಪ್ಪರೆಡ್ಡಿ, ವಿಜ್ಞಾನ ಮೇಷ್ಟ್ರು ಕೆ.ಎಲ್.ಕೃಷ್ಣಮೂರ್ತಿ, ಗಣಿತ ಮೇಷ್ಟ್ರು ಎನ್.ರಾಜಣ್ಣ, ಕನ್ನಡ ಮೇಷ್ಟ್ರು ಗಂಗಿರೆಡ್ಡಿ, ಸಂಗೀತ ಶಿಕ್ಷಕಿ ವಿಜಯಲಕ್ಷ್ಮಿ, ಜೀವಶಾಸ್ತ್ರ ಶಿಕ್ಷಕಿ ಲಲಿತಮ್ಮ, ಕ್ರೀಡಾ ಶಿಕ್ಷಕ ಮುನಿರೆಡ್ಡಿ, ಸಮಾಜ ವಿಜ್ಞಾನ ಮೇಷ್ಟ್ರು ಕೆ.ವಿ.ರಮೇಶ್, ಕ್ರಾಫ್ಟ್ ಟೀಚರ್ ಬಿ.ವೆಂಕಟೇಶ್, ಪ್ರಥಮ ದರ್ಜೆ ಗುಮಾಸ್ತ ಮಂಜುನಾಥ್ ತಮ್ಮ ಪ್ರೀತಿಯ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿದರು.

ಇದೇ ವೇಳೆ ತಮ್ಮ ಪ್ರೀತಿಯ ಮೇಷ್ಟ್ರು ಕೆ.ವಿ.ರಮೇಶ್ ರವರ ಪುತ್ರಿ ಕೆ.ಆರ್.ನಂದಿನಿ ಕಳೆದ ೨೦೧೭ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ದೇಶದ ಪ್ರಥಮ ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಂದು ಕರ್ನಾಟಕ ರಾಜ್ಯದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ ಹಳೆಯ ವಿದ್ಯಾರ್ಥಿ ಬಳಗದಿಂದ ಸನ್ಮಾನಿಸಲಾಯಿತು.

ಇದಕ್ಕೂ ಮುಂಚಿತವಾಗಿ ೩೩ ವರ್ಷಗಳ ಹಿಂದೆ ಒಟ್ಟಿಗೆ ಓದಿದ ಶಾಲೆಯ ಸ್ನೇಹಿತರು ಒಬ್ಬೊಬ್ಬರಾಗಿ ಸೇರುತ್ತಿದ್ದಂತೆ, ಮೂರು ದಶಕಗಳ ನಂತರ ಪರಸ್ಪರ ಕೈಕುಲುಕಿ ಪರಸ್ಪರ ಆಲಿಂಗಿಸಿಕೊ0ಡು ತಮ್ಮ ಸ್ನೇಹಿತರ ಜೊತೆಗೆ ಒಂದಿಷ್ಟು ಮುಗುಳ್ನಗು ಕೊಟ್ಟು ಹರಟುತ್ತಿದ್ದ ದೃಶ್ಯಗಳು ನೋಡುಗರಿಗೂ ಸಂತೋಷ ಮತ್ತು ಧೀರ್ಘ ಕಾಲದ ನಂತರ ಸೇರಿದ ಅವರ ನಿಷ್ಕಲ್ಮಶ ಪ್ರೀತಿ ಕಂಡು ಕಣ್ತುಂಬಿಕೊ0ಡರು.
ಸಂಗೀತ ಶಿಕ್ಷಕಿ ವಿಜಯಲಕ್ಷ್ಮಿ ರವರು ರಚಿಸಿದ ಪ್ರತಿಯೊಬ್ಬ ಗುರುವನ್ನು ಆಹ್ವಾನಿಸುವ ಸ್ವಾಗತ ಗೀತೆಯನ್ನು ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸೊಗಸಾಗಿ ಮೂಡಿಬಂತು.

ಹಳೆಯ ವಿದ್ಯಾರ್ಥಿ ಹಾಗೂ ಉಪಪ್ರಾಂಶುಪಾಲ ವಿಜಯಾನಂದ ಅಧ್ಯಕ್ಷತೆಯಲ್ಲಿ ರಾಘವ, ಅಚ್ಯುತ್ತರಾವ್, ಮದನಹಳ್ಳಿ ಬಿ.ಶಿವಪ್ಪ, ಬದ್ರಿನಾರಾಯಣ, ಶ್ರೀನಿವಾಸ್, ಶ್ರೀನಾಥ್, ರವೀಂದ್ರ, ಅನಂತ ರಾಘವ, ರಘುನಾಥ್ ಗೆಳೆಯರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಶಾರದಮ್ಮ ಸ್ವಾಗತಿಸಿದರು. ಮಂಜುಳ ನಿರೂಪಸಿ, ವಂದಿಸಿದರು.

ಇಂದಿನ ಮಕ್ಕಳು ಮೊಬೈಲ್ ಫೋನ್ ನಿಂದ ತಮ್ಮ ಬಾಲ್ಯದ ಅಮೂಲ್ಯ ಅನುಭವಗಳಿಂದ ವಂಚಿತರಾಗಿ, ಬಾಲ್ಯದಲ್ಲಿ ಕಲಿಯಬೇಕಾದ ಜೀವನ ಮೌಲ್ಯಗಳನ್ನು ಕಳೆದುಕೊಳ್ಳುತತಿದ್ದಾರೆ, ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರ ಇಟ್ಟರೆ ಮಾತ್ರ ಉತ್ತಮ ಪ್ರಜೆಗಳಾಗಿ ಬೆಳೆಯಬಲ್ಲರು.

– ತಿಪ್ಪಾರೆಡ್ಡಿ, ನಿವೃತ್ತ ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ. ಕೋಲಾರ.

ಮೂರು ದಶಕಗಳ ನಂತರ ನನ್ನ ಎಲ್ಲಾ ಸಹಪಾಠಿ ಗೆಳೆಯರು ಒಟ್ಟಿಗೆ ಸೇರಿದ್ದು ತುಂಬಾ ಸಂತೋಷ ತಂದಿದೆ. ನನ್ನ ಪ್ರೀತಿಯ ಮೇಷ್ಟ್ರು, ಮೇಡಂ, ಗೆಳೆಯರು ಒಟ್ಟಿಗೆ ಸೇರಿದ್ದು, ನನ್ನ ಬಾಲ್ಯಕ್ಕೆ ಮತ್ತೊಮ್ಮೆ ಕರೆದೊಯ್ದಂತೆ ಭಾಸವಾಯಿತು.

– ಮದನಹಳ್ಳಿ ಪಿ.ಶಿವಪ್ಪ , ಕರ್ನಾಟಕ ಲೋಕೋಪಯೋಗಿ ಇಲಾಖೆ ಪರವಾನಿಗೆ ಹೊಂದಿರುವ ಪ್ರಥಮ ದರ್ಜೆ ಗುತ್ತಿಗೆದಾರರು.

 

 

 

 

 

 

 

 

 

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!