• Sat. Apr 27th, 2024

PLACE YOUR AD HERE AT LOWEST PRICE

ಕೆಜಿಎಫ್: ಬೇತಮಂಗಲದ ಪಾಲಾರ್ ಕೆರೆ ದಡದಲ್ಲಿ ಚೋಳರಕಾಲದಲ್ಲಿ ನಿರ್ಮಿಸಿರುವ ಮುಜರಾಯಿ ಇಲಾಖೆಯ ಪುರಾಣ ಪ್ರಸಿದ್ಧ ಶ್ರೀ ವಿಜಯೇಂದ್ರ ಸ್ವಾಮಿ ದೇಗುಲದ ಹುಂಡಿ ಹಣ ದುರುಪಯೋಗವಾಗಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್ ಆಗ್ರಹಿಸಿದರು.

ಅವರು ಬೇತಮಂಗಲದಲ್ಲಿ ವಿಜಯೇಂದ್ರ ಸ್ವಾಮಿ ಜಾತ್ರೆಯ ಪೂರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೦೨೧-೨೨, ೨೦೨೨-೨೩ನೇ ಸಾಲಿನ ೨ ವರ್ಷಗಳಿಂದ ದೇಗುಲ ಕನ್ವೀನರ್ ಅ.ಮು ಲಕ್ಷ್ಮೀನಾರಾಯಣ ಸಭೆಯಲ್ಲಿ ಚರ್ಚಿಸದೆ ಏಕ ಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ದೇಗುಲದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ಮುಜರಾಯಿ ತಹಸೀಲ್ದಾರ್‌ಗೆ ದೂರು ನೀಡಿ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಹೇಳಿದರು.

ಮುಜರಾಯಿ ದೇಗುಲಗಳ ಕಮಿಟಿಗಳನ್ನು ರಾಜ್ಯಾದ್ಯಾಂತ ಸರ್ಕಾರವೇ ರದ್ದುಪಡಿಸಿದ್ದರೂ, ದೇಗುಲಕ್ಕೆ ನಾನೇ ಕನ್ವೀನರ್ ಎಂದು ದೇಗುಲ ಹಿಂದಿನ ಕಮಿಟಿ ಸದಸ್ಯರ ಹಾಗೂ ತಾಹಸೀಲ್ದಾರ್‌ರ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡದೆ ಹಣ ದುರುಪಯೋಗ ಪಡಿಸಕೊಂಡು ೨ ವರ್ಷಗಳಿಂದ ಲೆಕ್ಕಾಚಾರಗಳನ್ನು ನೀಡುತ್ತಿಲ್ಲ, ೨ ವರ್ಷಗಳಿಂದ ಜಾತ್ರೆಗೆ ವಸೂಲಿಯಾಗಿರುವ ಮತ್ತು ಖರ್ಚುಗಳ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ. ಕೇಳಿದ್ದಕ್ಕೆ ಹುಂಡಿ ಹಣ ೨.೫೦ಲಕ್ಷ ನಮ್ಮ ಮನೆಯಲ್ಲಿದೆ ೨ ದಿನಗಳಲ್ಲಿ ಬಡ್ಡಿ ಹಾಕಿ ತಂದು ಕೋಡುತ್ತೇವೆಂದು ಉಡಾಪೆ ಉತ್ತರ ಹೇಳುತ್ತಾರೆ ಎಂದು ದೂರಿದರು.

ವರ್ಷಕ್ಕೆ ೧೮-೨೦ ಲಕ್ಷ ರೂ., ಹುಂಡಿ ಹಣ ಸಂಗ್ರಹವಾಗುವ ಗುರಿ ಇದೆ, ಆದರೆ ಇವರು ೨ ವರ್ಷಗಳಿಗೆ ೨.೫೦ಲಕ್ಷ ಹಣ ಇದೆ ಎಂದರೆ ಯಾವ ಲೆಕ್ಕವೆಂದು ಪ್ರಶ್ನಿಸಿದ್ದಾರೆ. ದೇಗುಲದಲ್ಲಿ ನೂತನ ವರ್ಷ, ವೈಕುಂಠ ಏಕಾದಶಿ, ಶ್ರಾವಣ ಶನಿವಾರ, ಭರತ ಹುಣ್ಣಿಮೆ, ಬ್ರಹ್ಮರಥೋತ್ಸವ ಸೇರಿದಂತೆ ಹಲವು ಹಬ್ಬ ಹರಿದಿನಗಳಲ್ಲಿ ದೇಗುಲಕ್ಕೆ ಸಾವಿರಾರು ಭಕ್ತರು ಆಗಮಿಸಿ ಕಾಣಿಕೆಗಳನ್ನು ಹಾಕುತ್ತಾರೆ.

ಮುಜರಾಯಿ ಇಲಾಖೆಗೆ ಸೇರಿದ ದೇಗುಲದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ, ದೇವತಾ ಕಾರ್ಯಗಳನ್ನು ಕೈಗೊಳ್ಳಬೇಕು, ಅವರ ಆದೇಶಗಳನ್ನು ಗಾಳಿಗೆ ತೂರಿ ಕಮಿಟಿ ರದ್ದಾಗಿದ್ದರೂ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

ಕಳೆದ ೨ ವರ್ಷಗಳಿಂದ ದೇವಾಲಯದ ಅಭಿವೃದ್ಧಿಯೂ ಶೂನ್ಯವಾಗಿದೆ. ದೇಗುಲಕ್ಕೆ ಸೇರಿದ ವಾಣಿಜ್ಯ ಮಳಿಗೆಗಳಿವೆ ಇವುಗಳ ಬಾಡಿಗೆ ಹಣ ಸೂರಿಕೆಯಾಗುತ್ತಿದೆ. ಇತ್ತೀಚೆಗೆ  ರಾಜಗೋಪುರ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದಾರೆ. ಇದಕ್ಕೆ ಅನುದಾನ ಕೊಟ್ಟವರು ಯಾರು ಯಾವ ಯೋಜನೆಯ ಅಡಿಯಲ್ಲಿ ಕಾಮಗಾರಿ ಕೈಗೊತ್ತಿಗೊಳ್ಳಲಾಗಿದೆ ಎಂದರೆ ನಮ್ಮ ಸ್ವಂತ ಹಣ ಎನ್ನುತ್ತಾರೆ. ಆದರೆ ಸಮರ್ಪಕ ಉತ್ತರ ನೀಡುತ್ತಿಲ್ಲವೆಂದು ಗ್ರಾಪಂ ಸದಸ್ಯ ಶೇಷಾದ್ರಿ ಆರೋಪಿಸಿದರು.

ಇನ್ನೆರಡು ದಿನಗಳಲ್ಲಿ ೨ ವರ್ಷಗಳಿಂದ ಜಾತ್ರೆಗೆ ವಸೂಲಿಯಾಗಿರುವ ಮತ್ತು ಖರ್ಚಾಗಿರುವ ಹಣದ ಲೆಕ್ಕಾಚಾರ ಮತ್ತು ಹುಂಡಿ ಎಣಿಕೆಯ ಹಣದ ಲೆಕ್ಕಗಳನ್ನು ಹಿಂದಿನ ಕಮಿಟಿ ಸದಸ್ಯರು ಮತ್ತು ಕನ್ವೀನರ್ ಸಮರ್ಪಕವಾಗಿ ದಾಖಲೆಗಳ ಸಮೇತ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಜರಾಯಿ ಇಲಾಖೆಯ ತಾಹಸೀಲ್ದಾರ್‌ಗೆ ದೂರು ನೀಡಿ ಸಮಗ್ರ ತನಿಖೆಗೆ ಆಗ್ರಹಿಸುತ್ತೇವೆ ಎಂದು ಹಿರಿಯ ಮುಖಂಡ ವೆಂಕಟೇಶಪ್ಪ ಹೇಳಿದರು.

ಏ.೬ ರಿಂದ ವಿಜಯೇಂದ್ರ ಸ್ವಾಮಿ ಜಾತ್ರೆ ಪ್ರಾರಂಭವಾಗಲಿದೆ ಆದರೆ ಈ ಬಾರಿ ಗ್ರಾಪಂಯ ಆಡಳಿತ ಮಂಡಳಿಯ ನೇತೃತ್ವದಲ್ಲಿ ಪಾರದರ್ಶಕವಾಗಿ ಲೆಕ್ಕಪತ್ರಗಳೊಂದಿಗೆ ಜಾತ್ರೆಯನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮಾಡುತ್ತೇವೆಂದು ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್ ತಿಳಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!