• Fri. May 17th, 2024

“ಡಿವಿಜಿ ನೆನಪುಗಳಲ್ಲಿ ಡಾಕ್ಟರ್ ಗುಂಡಣ್ಣ” ಡಿವಿಜಿ ಹೆಸರು ಕೇಳಿದ ತಕ್ಷಣ ನಮಗೆ ತಟ್ಟನೆ ಹೊಳೆಯುವುದು ಅವರ ಮಂಕುತಿಮ್ಮನ ಕಗ್ಗ

PLACE YOUR AD HERE AT LOWEST PRICE

“ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ”.

ಹೀಗೆ ಡಿವಿಜಿಯವರ ಮಂಕುತಿಮ್ಮನ ಕಗ್ಗ ಎಷ್ಟು ಜನಪ್ರಿಯತೆ ಗಳಿಸಿದೆ ಎಂದರೆ ಸರ್ವಜ್ಞನ ತ್ರಿಪದಿಗಳು,  ತೆಲುಗಿನ ವೇಮನ ಕವಿಯ ಪದ್ಯಗಳು, ಹಾಗೆಯೇ ತಮಿಳಿನ ತಿರುವಳ್ಳುವರ್ ರಚನೆಗಳು ಹೇಗೆ ಜನಪ್ರಿಯತೆ ಹೊಂದಿ ಜನಮಾನಸದಲ್ಲಿ ಉಳಿದಿವೆಯೋ ಹಾಗೆ ಡಿವಿಜಿ ರವರ ಮಂಕುತಿಮ್ಮನ ಕಗ್ಗ ಸಹ ಅಷ್ಟೇ ಜನಪ್ರಿಯವಾಗಿ ಮನೆ ಮಾತಾಗಿದೆ. ಹೇಳಬೇಕಾದ ವಿಚಾರಗಳನ್ನು ಬಹಳ ಮಾರ್ಮಿಕವಾಗಿ, ಅಷ್ಟೇ ಅರ್ಥಪೂರ್ಣವಾಗಿ ಹೇಳಿ ಸಮಾಜಕ್ಕೆ ಒಂದು ನಿರ್ದಿಷ್ಟ ಸಂದೇಶವನ್ನು ನೀಡುತ್ತಿದ್ದವರು ಡಿವಿಜಿರವರು. ಅವರು ಸ್ವಾತಂತ್ರ್ಯ ಪೂರ್ವದ ಭಾರತವನ್ನು ಕಂಡವರು ಸ್ವಾತಂತ್ರ್ಯ ನಂತರದ ಭಾರತವನ್ನು ಕಂಡವರು, ವಿಶ್ವೇಶ್ವರಯ್ಯನವರಂತಹ ಮಹನೀಯರನ್ನು ಬಹಳ ಹತ್ತಿರದಿಂದ ಕಂಡವರು ಹಾಗಾಗಿಯೇ ಅವರ ಶಬ್ಧ ಸಂಪತ್ತು, ವಿಚಾರ ಸಂಪತ್ತು ಸಂವೃದ್ಧವಾದದ್ದು.

ಕೇವಲ ಮಂಕುತಿಮ್ಮನ ಕಗ್ಗವಷ್ಟೇ ಅಲ್ಲ ಡಿವಿಜಿ ರವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಶ್ರೇಷ್ಠ ಕೊಡುಗೆಯನ್ನು ನೀಡಿದ್ದಾರೆ. ಡಿವಿಜಿ ಎಂದೇ ಹೆಸರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು (1887-1975) ನಾಟಕಗಳನ್ನು ಬರೆದಿದ್ದಾರೆ, ಮಕ್ಕಳ ಸಾಹಿತ್ಯವನ್ನು ಬರೆದಿದ್ದಾರೆ, ವಿಚಾರ ವಿಮರ್ಶೆಗಳನ್ನು ಬರೆದಿದ್ದಾರೆ, ಜೀವನಧರ್ಮಯೋಗದ ಬಗ್ಗೆ ಬರೆದಿದ್ದಾರೆ,  ರಾಜ್ಯಶಾಸ್ತ್ರ ರಾಜ್ಯಾಂಗದ ಬಗ್ಗೆ ಬರೆದಿದ್ದಾರೆ, ಅದಕ್ಕಾಗಿಯೇ ಡಿವಿಜಿ ರವರನ್ನು ಭಾರತೀಯ ಸಾಹಿತ್ಯದ ಅಶ್ವತ್ಥಾಮ ಎಂದು ಕರೆಯುವುದು. ಹೀಗೆ ಅವರೊಬ್ಬ ಸಾಹಿತಿಯಾಗಿ, ಪತ್ರಕರ್ತರಾಗಿ ನಾಡು ಕಂಡ ಹಲವಾರು ಸಾಹಿತಿ ಸಜ್ಜನರ ಬಗ್ಗೆ ತಮ್ಮ ಜನಪ್ರಿಯವಾದ ನೆನಪಿನ ಚಿತ್ರಗಳ ಮಾಲೆಯಲ್ಲಿ ಬರೆದಿದ್ದಾರೆ. ತಮ್ಮ ಮೇಲೆ ಪ್ರಭಾವ ಬೀರಿದ, ನೆನಪಿನಲ್ಲಿ ಸದಾ ಉಳಿದು ಹೋಗುವ ಹಲವಾರು ವ್ಯಕ್ತಿ ಚಿತ್ರಗಳ ಬಗ್ಗೆ ತಮ್ಮ ಜ್ಞಾಪಕ ಚಿತ್ರ ಶಾಲೆಯಿಂದ ಹೆಕ್ಕಿ ತೆಗೆದು ಬರೆದಿದ್ದಾರೆ. ಆದರೆ ಡಿವಿಜಿ ರವರ ಮಂಕುತಿಮ್ಮನ ಕಗ್ಗ ಈ ಎಲ್ಲಾ ಸಾಹಿತ್ಯವನ್ನು ಮರೆಸುವಂತೆ ಮಾಡಿರುವುದರಿಂದ ಅವರ ಜ್ಞಾಪಕ ಚಿತ್ರ ಶಾಲೆ ಅಷ್ಟಾಗಿ ಚರ್ಚೆಯಾಗುತ್ತಿಲ್ಲ ಎಂದೇ ಹೇಳಬಹುದು. ಅವರು ಮೆಲುಕು ಹಾಕಿರುವ ಹಲವಾರು ಪಾತ್ರಗಳಲ್ಲಿ ಇಂದಿನ ಪರಿಸ್ಥಿತಿಯಲ್ಲಿ ವೈದ್ಯಕೀಯ ಲೋಕವನ್ನು ಕಂಡಾಗ ನಮಗೆ ನೆನಪಾಗುವುದು “ಡಾಕ್ಟರ್ ಗುಂಡಣ್ಣ” ರವರ ಸರಳ ಸಜ್ಜನಿಕೆ ವ್ಯಕ್ತಿತ್ವ, ಅವರು ರೋಗಿಗಳನ್ನು ತಪಾಸಣೆ ಮಾಡುತ್ತಿದ್ದ ವಿಧಾನ ಮತ್ತು ರೋಗವನ್ನು ಕಂಡುಹಿಡಿಯುವ ಕೌಶಲ್ಯ ಹಾಗೆ ಔಷಧಿಯನ್ನು ನೀಡುತ್ತಿದ ವಿಧಾನದ ಬಗ್ಗೆ ಈಗ ಪ್ರಸ್ತುತವೆನಿಸಿತು  ಹಾಗಾಗಿ ಈ ಲೇಖನ.

ಡಾಕ್ಟರ್ ಗುಂಡಣ್ಣನವರನ್ನು ಸ್ಮರಿಸಲು ಮೂಲ ಕಾರಣ ಇತ್ತೀಚೆಗೆ ನಮ್ಮ ತಾಯಿ ಗ್ಯಾಸ್ಟ್ರಿಕ್ ನಿಂದ ಬಳಲುತ್ತಿದ್ದರು ಅವರ ಆರೋಗ್ಯ ಸುಧಾರಣೆಗೆ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದೆವು, ಆಗ ನಾನು ಗಮನಿಸಿದ ವಿಚಾರವೆಂದರೆ ಈಗ ಮೊದಲಿನಂತೆ ಸಾಂಪ್ರದಾಯಿಕ ನಾಡಿ ಹಿಡಿದು, ಮುಖ ಚಹರೆ ಇತರೆ ವಿಧಾನದ ಮೂಲಕ ರೋಗಲಕ್ಷಣ ಕೇಳಿ ತಿಳಿದುಕೊಂಡು ಚಿಕಿತ್ಸೆ ನೀಡುವುದು ಕಡಿಮೆ, ಬದಲಾಗಿ ಕೆಲವರು ಮಲ, ಮೂತ್ರ, ರಕ್ತ ಪರೀಕ್ಷೆ, ಸ್ಕಾನಿಂಗ್, ಎಂಡೋಸ್ಕೋಪಿ ಮುಂತಾದ ಹಲವಾರು ಪರೀಕ್ಷೆಗಳನ್ನು ನಡೆಸಿ ನಂತರ ಔಷಧಿಯನ್ನು ನೀಡುವ ಪದ್ಧತಿ ಬೆಳೆಯುತ್ತಿರುವುದು ನಿಜಕ್ಕೂ ಇದು ರೋಗಿಗಳಿಗೆ ಅತಿಯಾದ ಹೊರೆಯೆ ಸರಿ, ಆದರೆ ಇಷ್ಟೆಲ್ಲಾ ವಿಜ್ಞಾನ ಬೆಳೆಯದ ಪೂರ್ವದಲ್ಲಿ ಹೇಗೆ ಸರಳವಾಗಿ ಚಿಕಿತ್ಸೆ ನೀಡುತ್ತಿದ್ದರು ಎಂಬುದಕ್ಕೆ ಒಂದು ಚಿಕ್ಕ ಉದಾಹರಣೆ ಡಾಕ್ಟರ್ ಗುಂಡಣ್ಣನವರು.

ಗುಂಡಣ್ಣ ಎಂದು ಹೆಸರುವಾಸಿಯಾದ ಎಸ್.ಆರ್. ನರಸಿಹಯ್ಯಂಗಾರ್ ರವರು ಪ್ರಸಿದ್ಧವಾದ ಸೆಟ್ಲೂರ್ ಮನೆತನದವರು. ಬೆಂಗಳೂರಿನಲ್ಲಿ ತಮ್ಮ “ರೆಲೆಯನ್ಸ್”   ಚಿಕಿತ್ಸಾಲಯವನ್ನು ಹೊಂದಿದ್ದವರು, ಆಗಿನ ಪದ್ಧತಿಯಂತೆ ಬೆಳಿಗ್ಗೆ ಎದ್ದು ಮೊದಲು ರೋಗಿಗಳ ಮನೆಗಳಿಗೆ ಹೋಗಿ ಚಿಕಿತ್ಸೆ ನೀಡಿ ನಂತರ ತಮ್ಮ ಚಿಕಿತ್ಸಾಲಯಕ್ಕೆ ಬಂದರೆ, ಅಲ್ಲಿ ಅವರಿಗಾಗಿ ಕಾದಿದ್ದ ಸ್ನೇಹಿತರೊಂದಿಗೆ ಹರಟುತ್ತಾ ಒಬ್ಬೊಬ್ಬರೇ ರೋಗಿಯನ್ನು ನಿಧಾನವಾಗಿ ಪರೀಕ್ಷೆ ಮಾಡುತ್ತಾ, ಮದ್ಯೆ ಮದ್ಯೆ ಹಾಸ್ಯ ಚಟಾಕಿ ಹಾರಿಸಿ ಬಂದ ರೋಗಿಗಳಲ್ಲಿ ನೋವಿನ ವಿಚಾರ ಮರೆಸಿ ಅವರಲ್ಲಿ ಉತ್ಸಾಹ ತರಿಸುತ್ತಿದ್ದರು, ಒಂದು ರೀತಿಯ ಭರವಸೆ ತರಿಸುತ್ತಿದ್ದರು. ಅವರು ನಾಡಿ ಮುಟ್ಟಿ ನೋಡಿದರೆ ಸಾಕು ಕಾಯಿಲೆ ವಾಸಿಯಾಗುತ್ತದೆ ಎಂಬ ಭರವಸೆಯನ್ನು ಮೂಡಿಸುತ್ತಿದ್ದರು. ಅಂತಹ ಸರಳ ಸಜ್ಜನಿಕೆಯ ವೈದ್ಯರ ಬಗ್ಗೆ ಡಿವಿಜಿರವರು ತುಂಬಾ ಅಭಿಮಾನದಿಂದ ಮೆಲುಕು ಹಾಕಿದ್ದಾರೆ.

ಡಾಕ್ಟರ್ ಗುಂಡಣ್ಣವರು ಡಿವಿಜಿ ರವರಿಗೆ ಚಿರಪರಿಚಿತರು ಹಾಗಾಗಿ ಒಮ್ಮೆ ಡಿವಿಜಿ ರವರಿಗೆ ಉದರಶೂಲೆ ಬರಲಾರಂಭಿಸಿದಾಗ ಸಂಕೋಚದಿಂದಲೇ ಅವರ ಬಳಿ ತೋರಿಸಲು ಹೋಗುತ್ತಾರೆ. ಬೆಳಿಗ್ಗೆ 9 ಗಂಟೆಗೆ ಚಿಕಿತ್ಸಾಲಯಕ್ಕೆ ಹೋದ ಡಿವಿಜಿ ರವರನ್ನು ಬಂದ ಕಾರಣ ತಿಳಿದು ಆಯಿತು ನೋಡೋಣ ಎಂದು ಹೇಳಿ ಯಾವ ಚಿಕಿತ್ಸೆಯೂ ನೀಡದೆ 12 ಗಂಟೆಯವರೆಗೂ   ಸುಮ್ಮನೆ ಕೂರಿಸುತ್ತಾರೆ, ಇದರಿಂದ ಬೇಸರಗೊಂಡ ಡಿವಿಜಿ ರವರು ವಾಪಸ್ಸು ಮನೆಗೆ ಹೊರಡಬೇಕು ಎಂದು ಎದ್ದಾಗ ಡಿವಿಜಿ ರವರನ್ನು ಗುಂಡಣ್ಣ ನವರು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. “ತನಗೆ ಔಷಧಿ ಕೊಡಿ ಮನೆಗೇಕೆ?” ಎಂದು ಡಿವಿಜಿ ರವರು ಪ್ರಶ್ನಿಸಿದಾಗ “ನೀವು ಊಟಮಾಡುವ ವಿಧಾನ ತಿಳಿದು ನಂತರ ಔಷಧಿ ನೀಡುತ್ತೇನೆ” ಎಂದು ಹೇಳಿದ ಗುಂಡಣ್ಣನವರು ಊಟಕ್ಕೆ ಕುಳಿತ ಡಿವಿಜಿ ರವರಿಗೆ ಮೂರು ಬಗೆಯ ಪಲ್ಯ, ಗೊಜ್ಜು, ಉಪ್ಪಿನಕಾಯಿ, ಅನ್ನ, ಚಟ್ನಿ, ಹಪ್ಪಳ, ಸಂಡಿಗೆ  ಬಡಿಸಿದ ನಂತರ ತೊವ್ವೆ ಬಡಿಸಲು ಬಂದಾಗ ಡಿವಿಜಿ ರವರು ಅಜೀರ್ಣದಿಂದ ಬಳಲುತ್ತಿದ್ದರಿಂದ “ಬೇಡ ಬೇಳೆ ಜೀರ್ಣವಾಗುವುದು ಕಷ್ಟ”   ಎಂದು ಹೇಳುತ್ತಾರೆ ಅದಕ್ಕೆ ಗುಂಡಣ್ಣವರು ಅವರ ಸ್ನೇಹಿತರಾದ ನಾರದರಿಂದ ನಮ್ಮ ಕೋಲಾರದ ಕಡೆ ತೆಲುಗು ಭಾಷೆಯಲ್ಲಿ ಜನಪ್ರಿಯವಾಗಿರುವ ಒಂದು ಜನಪ್ರಿಯ ಕವಿತೆ ಹೇಳಿಸುತ್ತಾರೆ.

” ಅಪ್ಪು ಸೊಪ್ಪುಲು ಜೇಸಿ
ಚಪ್ಪು ದೆಬ್ಬಲು ತಿನಿ|
ಪಪ್ಪೇ ತಿನೆವಲೆರಾ – ಮಂಚಿ ಕಂದಿ
ಪಪ್ಪೇ ತಿನೆವಲೆರಾ”||

ಅಂದರೆ ಸಾಲವಾದರೂ ಮಾಡಿ ಸಾಲ ಕೊಟ್ಟವರಿಂದ ಚಪ್ಪಲಿ ಏಟು ತಿಂದರೂ ಪರವಾಗಿಲ್ಲ ಆದರೆ ಒಳ್ಳೆಯ ತೊಗರಿ ಬೆಳೆಯಯಿಂದ ತಯಾರಿಸಿದ ಪಪ್ಪುಸಾರು  ತಿನ್ನಬೇಕು ಎಂದು ಅದರ ಅರ್ಥ. ತೊಗರಿ ಬೇಳೆ ಬೆರೆತ ಸಾಂಬಾರ್ ಅಷ್ಟು ರುಚಿಯಾಗಿರುತ್ತದೆ. ಆದರೆ ತೊಗರಿ ಬೇಳೆಯ ತೊವ್ವೆ ಅಜೀರ್ಣಕಾರಕ ಎಂದು ಡಿವಿಜಿ ರವರು ಹಿಂದೇಟು ಹಾಕಿದಾಗ ಗುಂಡಣ್ಣನವರು ಅದನ್ನು ಸಹ ಬಡಿಸುತ್ತಾರೆ. ಹೀಗೆ ಎಲ್ಲವನ್ನೂ ಬಡಸಿದ ನಂತರ  ನಮ್ಮ ಹಾಗೆ ಎಲೆಯಲ್ಲಿ ತಿನ್ನದೆ ಮೂಲೆಗೆ ಇಟ್ಟಿದ್ದ ಕೆಲವು ತರಕಾರಿಗಳನ್ನು ಸಹ ಬಲವಂತವಾಗಿ ತಿನ್ನಿಸಿ ಕಡೆಯದಾಗಿ ಕಾಫಿ ಕುಡಿಸಿ, ಕಾಫಿಯ ಗಸಿಯನ್ನು ಕುಡಿಯದೆ ಬಿಟ್ಟಾಗ ಅದನ್ನು ಬಲವಂತವಾಗಿ ಕುಡಿಸಿ ನಂತರ ತಮ್ಮ ಕುದುರೆ ಗಾಡಿಯಲ್ಲಿ ಶಂಕರಪುರದಲ್ಲಿ ಇದ್ದ ಡಿವಿಜಿ ರವರ ಮನೆಗೆ ತಂದು ವಾಪಸು ಬಿಡುತ್ತಾರೆ. ಆಗ ಅಚ್ಚರಿಗೊಂಡ ಡಿವಿಜಿ ರವರು “ಔಷಧವೆಲ್ಲಿ?”  ಎಂದು ಕೇಳಿದಾಗ ಗುಂಡಣ್ಣ ನವರು ” “ಊಟದಲ್ಲಿ ಆಗಿದೆ” ಎಂದು ಹೇಳುತ್ತಾರೆ. ಡಿವಿಜಿ ರವರು “ರಾತ್ರಿಗೆ ಔಷಧ” ಎಂದು ಕೇಳಿದಾಗ “ಹಸಿವಾಗದಿದ್ದರೆ ಊಟ ಮಾಡಬೇಡ” ಎಂದು ಹೇಳಿ ಹೊರಡುತ್ತಾರೆ. ನಿಜಕ್ಕೂ ಗುಂಡಣ್ಣನವರ ಚಿಕಿತ್ಸಾ ವಿಧಾನ ಕಂಡು ಡಿವಿಜಿ ರವರು ಅಚ್ಚರಿಗೊಳ್ಳುತ್ತಾರೆ, ಯಾವ ಸೂಜಿಯೂ ಚುಚ್ಚದೆ, ಯಾವ ಗುಳಿಗೆಯೂ ನೀಡದೆ, ಯಾವ ಪತ್ಯವನ್ನೂ ಸೂಚಿಸದೆ ಜೊತೆಯಲ್ಲಿಯೇ ಇದ್ದು ರೋಗಿಯ ಹಾವಭಾವಗಳನ್ನು ವೀಕ್ಷಿಸಿ, ರೋಗಿಗೆ ಇರುವ ಭಯವನ್ನು ಹೋಗಲಾಡಿಸಿ, ರೋಗಿಯಲ್ಲಿ ಸಾಧಾರಣವಾಗಿ ತಪ್ಪು ಕಲ್ಪನೆಯಿಂದ ಇರುವ ಸ್ವಯಂ ನಿರ್ಣಯವನ್ನು ಅಂದರೆ ಅದು ತಿನ್ನಬಾರದು ಇದು ತಿನ್ನಬಾರದು ಎಂಬ ಭಾವನೆಯನ್ನು ಓಗಲಾಡಿಸಿ ನಮ್ಮ ಆಹಾರದಲ್ಲಿಯೇ ಔಷಧಿ ಉತ್ಪತ್ತಿಯಾಗಿ ನಮ್ಮೊಳಗೇ ರೋಗನಿರೋಧಕ ಶಕ್ತಿ ಹೆಚ್ಚಿಸುವ ಚಿಕಿತ್ಸಾ ವಿಧಾನ ಡಿವಿಜಿ ರವರಿಗೆ ಬಹಳಷ್ಟು ಇಷ್ಟವಾಗುತ್ತದೆ. ಕಡೆಗೆ ಗುಂಡಣ್ಣ ನವರ ಚಿಕಿತ್ಸೆ ಡಿವಿಜಿ ರವರಿಗೆ ಫಲಿಸಿತೆ? ಎಂದರೆ ಹೌದು ಡಿವಿಜಿ ರವರೇ ಹೇಳುವಂತೆ ಪ್ರತಿ ದಿನ ನಾಲ್ಕು ಗಂಟೆಗೆ ಡಿವಿಜಿ ರವರಿಗೆ ಬರುತ್ತಿದ್ದ ನೋವು ಮತ್ತೆಂದೂ ಬರುವುದಿಲ್ಲವಂತೆ. ಹೀಗಾಗಿಯೇ ಇಂಗ್ಲಿಷ್ ಮೆಡಿಸಿನ್ ಬಳಸದೆ ಊಟೋಪಚಾರದಲ್ಲಿ ಗುಣಪಡಿಸುತ್ತಿದ್ದ ಗುಂಡಣ್ಣನವರ ಚಿಕಿತ್ಸಾ ವಿಧಾನವನ್ನು, ಆ ಚಿಕಿತ್ಸಾ ವಿಧಾನ ಅರಿಯಲು ಪ್ರತಿ ದಿನ ವೈದ್ಯಕೀಯ ಶಿಕ್ಷಣ ಪಡೆದ ಹೊಸ ವೈದ್ಯರು ಅವರ ಬಳಿ ಪ್ರತಿ ದಿನ ಮೂರ್ನಾಲ್ಕು ಮಂದಿ ಕಲಿಯಲು ಬರುತ್ತಿದ ವಿಚಾರವನ್ನು ಡಿವಿಜಿ ರವರು ಸ್ಮರಿಸುತ್ತಾರೆ.

ಗುಂಡಣ್ಣನವರಲ್ಲಿ ವ್ಯಾವಹಾರಿಕ ಚಿಂತನೆಗಳಿಗಿಂತ ಸೇವಾ ಮನೋಭಾವ ಮೂಡಲು ಕಾರಣ ಅವರ ಮೇಲಿನ ಸಾಹಿತ್ಯದ ಪ್ರಭಾವ, “ಬೋಧಕನಿಗೆ ವಿಶಾಲವಾದ ಶಬ್ಧಸಂಪತ್ತಿರಬೇಕು, ಆ ಸಂಪತ್ತು ದೊರೆಯುವುದು ಕಾವ್ಯ ವ್ಯಾಸಂಗದಿಂದ, ಮನುಷ್ಯ ಸ್ವಭಾವದ ವಿಚಿತ್ರಗಳು ಮನದಟ್ಟಾಗುವುದು ಕಾವ್ಯ ವ್ಯಾಸಂಗದಿಂದ” ಎಂದು ಅರಿತವರು ಗುಂಡಣ್ಣನವರು ಹಾಗಾಗಿಯೇ ಅವರು ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುವವರಿಗೆ ವೈದ್ಯವಿದ್ಯೆಯ ಪರಿಣತಿಯೊಂದಿಗೆ ಸಾಹಿತ್ಯ ಪರಿಚಯ ಉಳ್ಳವರು ಆಗಿರಬೇಕು ಎಂದು ಬಯಸಿದವರು ಗುಂಡಣ್ಣನವರು, ಸಾಹಿತ್ಯದ ಗಂಧಗಾಳಿ ಆಸ್ವಾದಿಸಿದವರು ಗುಂಡಣ್ಣನವರು. ಅವರು ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು, ಸಂಸ್ಕೃತ ಶ್ಲೋಕಗಳನ್ನು ಹೃದ್ಗತವಾಗಿಸಿಕೊಂಡವರು ಅವರು ಸಮಾಜದಲ್ಲಿನ ವ್ಯಕ್ತಿಗಳ ಬಗ್ಗೆ ಹೇಳುತ್ತಾ.

ಮನೀಷಿಣಸ್ಸಂತಿ ನ ತೇ ಹಿತೈಷಿಣೋ
ಹಿತೈಷಿಣಂಸ್ಸಂತಿ ನೀ ತೇ ಮನೀಷಿಣ||

ಅಂದರೆ ಸಮಾಜದಲ್ಲಿ ಬುದ್ಧಿವಂತರಿದ್ದಾರೆ, ಆದರೆ ಅವರಲ್ಲಿ ಒಳ್ಳೆಯತನವಿಲ್ಲ. ಒಳ್ಳೆಯವರಿದ್ದಾರೆ, ಅವರಿಗೆ ಬುದ್ಧಿವಂತಿಕೆ ಇಲ್ಲ ಎಂದು ಈ ಶ್ಲೋಕದ ಅರ್ಥ. ನಮಗೆ ಕೇವಲ ಬುದ್ಧಿವಂತಿಕೆ ಇದ್ದರೆ ಸಾಲದು ಅದರ ಜೊತೆಗೆ ಮಾನವೀಯತೆ ಸಹ ಇರಬೇಕು, ಬೇರೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಇರಬೇಕು ಹಾಗಾದಾಗ ಮಾತ್ರ ಬದುಕಿಗೊಂದು ಅರ್ಥ, ನಮ್ಮ ಬುದ್ಧಿವಂತಿಕೆ ಸಹ ಸಾರ್ಥಕಗೊಳ್ಳುತ್ತದೆ ಎಂಬುದು ಅದರರ ಅರ್ಥ ಈ ರೀತಿಯ ಮಾನವೀಯತೆ ಗುಂಡಣ್ಣನವರು  ಅರಿತ ಕಾರಣ ಅವರ ನಡೆನುಡಿಯಲ್ಲಿ ಸುಸಂಸ್ಕೃತಿ ಮಿಳಿತವಾಗಿ ಅವರ ಚಿಕಿತ್ಸಾ ವಿಧಾನ ಅಷ್ಟು ವಿಶಿಷ್ಟವಾಗಿತ್ತು ಮತ್ತು ಅವರ ಸೇವಾ ಮನೋಭಾವದ ಚಿಕಿತ್ಸೆ ಅಷ್ಟು ಜನಪ್ರಿಯವಾಗಿತ್ತು.

ಗುಂಡಣ್ಣನವರು ಹಣಗಳಿಕೆಯ ಉದ್ದೇಶದಿಂದ ಚಿಕಿತ್ಸೆ ನೀಡುತ್ತಿರಲಿಲ್ಲ ಮಾನವೀಯತೆ ದೃಷ್ಟಿಯಿಂದ ನೋಡುತ್ತಿದ್ದರು ರೋಗಿಗಳ ಕಷ್ಟ ಅರಿತು ರೋಗಿಯ ಮನೆಗೆ ಹೋಗಿ ಚಿಕಿತ್ಸೆ ನೀಡಿ ಬರುತ್ತಿದ್ದರು, ಬಡವರಿಗೆ ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ ಹಣ ಸಹಾಯವನ್ನು ಮಾಡುತ್ತಿದ್ದರು. ಹೀಗಾಗಿಯೇ ತಮ್ಮ ಸೇವಾ ಮನೋಭಾವದಿಂದ ಗುಂಡಣ್ಣನವರು ಜನಪ್ರಿಯತೆ ಗಳಿಸಿದ್ದರು ದಿನಾಂಕ:10-3-1938 ರಂದು ಗುಂಡಣ್ಣನವರು ತೀರಿಕೊಂಡಾಗ ಅವರನ್ನು ಬಲ್ಲವರು ಅವರಿಂದ ಸಹಾಯ ಪಡೆದವರು ತಮ್ಮ ಕುಟುಂಬದ ಆಪ್ತ ಸದಸ್ಯ ತೀರಿಕೊಂಡಂತೆ ದುಃಖಿಸಿದರು ಎಂದು ಡಿವಿಜಿ ರವರು ಸ್ಮರಿಸುತ್ತಾರೆ. ಇಂತಹ “ವೈದ್ಯೋ ನಾರಾಯಣ ಹರಿ” ಎಂಬ ನಂಬಿಕೆ ಮೂಡಿಸುವ ಆ ತತ್ತ್ವದ ಮೇಲೆ ಸೇವಾಪರರಾಗಿರುವವರನ್ನು ವೈದ್ಯರನ್ನು ನಾವು ಸ್ಮರಿಸಬೇಕಾಗಿದೆ. ಅವರಂತಹ ಸೇವಾ ಮನೋಭಾವದ ವೈದ್ಯರನ್ನು ಸ್ಮರಿಸಿದಾಗ ಮಾತ್ರ ಸಮಾಜದಲ್ಲಿ ಮತ್ತಷ್ಟು ಸೇವಾ ಮನೋಭಾವನೆ ಬಿತ್ತಲು ಸಾಧ್ಯ ಎಂಬ ಕಾರಣದಿಂದ ಈ ಲೇಖನ ತಮ್ಮ ಮುಂದಿಡುತ್ತಿದ್ದೇನೆ.


ರಚನೆ:- ಬಿ.ಆರ್.ರವೀಂದ್ರ (ರಾಣಾ)
ವಕೀಲರು ಮತ್ತು ಸಾಹಿತಿಗಳು ಕೋಲಾರ.

Related Post

ಬೆಂಗಳೂರಿನ ಪುಸ್ತಕ ಮನೆ ಕೋಲಾರ ಜಿಲ್ಲೆಗೆ ಸ್ಥಳಾಂತರ : ಓದುಗ ಪ್ರಿಯರಿಗೆ ಸಂತೋಷದ ವಿಷಯ
ಆದಿಮದಲ್ಲಿ ಸಾಂಸ್ಕೃತಿಕ ಯಾನ -200ರ ಅದ್ದೂರಿ ಚಾಲನೆಗೆ ಕ್ಷಣಗಣನೆ .
ಮೂಲಭೂತ ಸೌಲಭ್ಯಗಳಿಲ್ಲದೆ ಹಂದಿಗೂಡಂತಾದ ಕಾಲೇಜು ಹಾಸ್ಟೆಲ್.

Leave a Reply

Your email address will not be published. Required fields are marked *

You missed

error: Content is protected !!