• Mon. Apr 29th, 2024

ದೊಡ್ಡವಲಗಮಾದಿಯಲ್ಲಿ ಜಾತಿ ನಿಂದನೆ, ಮಾರಣಾಂತಿಕ ಹಲ್ಲೆ:ದೂರು ದಾಖಲು.

PLACE YOUR AD HERE AT LOWEST PRICE

ಕೋಲಾರ,ಅಕ್ಟೋಬರ್.೨೦:ಗಾರೆ ಕೆಲಸ ಮಾಡಿ ಕೂಲಿ ಕೇಳಿದಕ್ಕೆ ಜಾತಿ ನಿಂದನೆ ಮಾಡಿ, ಕೈಕಾಲು ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಂಗಾರಪೇಟೆ ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮದಲ್ಲಿ ಜರುಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೊಡ್ಡವಲಗಮಾದಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅಮರೇಶ್ ಎಂಬಾತನೇ ಮಾರಣಾಂತಿಕ ಹಲ್ಲೆಗೊಳಗಾಗಿ, ತೀವ್ರ ಗಾಯಗಳೊಂದಿಗೆ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ.

ದೊಡ್ಡವಲಗಮಾದಿ ಗ್ರಾಮದ ಸವರ್ಣೀಯ ರಜಪೂತ ಸಮುದಾಯದ ಜಗದೀಶ್ ಸಿಂಗ್, ರವೀಂದ್ರ ಸಿಂಗ್ ಮತ್ತು ಸತೀಶ್ ಸಿಂಗ್ ಹಲ್ಲೆ ನಡೆಸಿರುವ ಆರೋಪಿಗಳು.

ಜಗದೀಶ್ ಸಿಂಗ್ ಎಂಬುವವನು ತನ್ನ ಮನೆ ನಿರ್ಮಾಣದ ಕೆಲಸಕ್ಕೆ ಅಮರೇಶ್‌ನನ್ನು ಕರೆಸಿ ಕೆಲಸ ಮಾಡಿಸಿಕೊಂಡ ನಂತರ ಕೂಲಿ ಕೊಡದೆ ಊರು ಬಿಟ್ಟು ಹೋಗಿದ್ದ, ಕಳೆದ ಮಂಗಳವಾರ ಅಕ್ಟೋಬರ್ ೧೭ ರಂದು ಗ್ರಾಮದಲ್ಲಿ ಕಾಣಿಸಿಕೊಂಡಾಗ ಕೂಲಿ ಹಣ ಕೊಡಿ ಎಂದು ಕೇಳಿದಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ  ಜಾತಿ ನಿಂದನೆ ಮಾಡಿದ ಜಗದೀಶ್ ಎಲ್ಲೆಂದರಲ್ಲಿ ಕೇಳುತ್ತೀಯಾ ಎಂದು ಬೆದರಿಕೆ ಹಾಕಿದ್ದಾನೆ.

ಜೊತೆಯಲ್ಲಿ ಇದ್ದ ರವೀಂದ್ರ ಸಿಂಗ್ ಮತ್ತು ಸತೀಶ್ ಸಿಂಗ್ ಸೇರಿ ಮೂರೂ ಜನ ಹಿಂಬದಿಯಿಂದ ಕೈಗಳನ್ನು ಕಟ್ಟಿ ಧರಧರನೇ ಎಳೆದೋಯ್ದು ಯಾವ ಮನೆ ಕೆಲಸ ಮಾಡಿದ್ದನೋ ಅದೇ ಮನೆಯ ಮುಂದೆ ಕಾಲುಗಳನ್ನು ಕಟ್ಟಿ ನಿಲ್ಲಿಸಿ, ಹಣ ಕೇಳ್ತೀಯಾ ಇನ್ನೊಮ್ಮೆ ಕೇಳಿದರೆ ಕಳ್ಳತನ ಮಾಡಿದ್ದೀಯ ಎಂದು ದೂರು ನೀಡುವುದಾಗಿ ಹೆದರಿಸಿ, ಮದ್ಯಾಹ್ನ ೩ ಗಂಟೆಯಿಂದ ಸಂಜೆ ೫ ಗಂಟೆಯ ತನಕ ಸುಮಾರು ೨ ಗಂಟೆಗಳು ಬೆಲ್ಟ್ ನಿಂದ ರಕ್ತ ಬರುವ ತನಕ ಹಿಗ್ಗಾಮುಗ್ಗಾ ಥಳಿಸಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. 

ಹೀಗೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ, ಗ್ರಾಮ ಪಂಚಾಯ್ತಿ ಸದಸ್ಯ ಮುನಿರಾಜು, ರಾಮಕೃಷ್ಣ, ವೆಂಕಟೇಶ್, ಉಮೇಶ್ ಮತ್ತಿತರರು ಸ್ಥಳಕ್ಕೆ ದಾವಿಸಿ, ಹಲ್ಲೆಗೊಳಗಾಗಿ ತೀವ್ರ ನಿತ್ರಾಣಗೊಂಡಿದ್ದ ಗಾಯಾಳುವಿನ ಕೈಕಾಲುಗಳಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ತಕ್ಷಣ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಎಂ.ಎಲ್.ಸಿ.ಯಾದ ಕೂಡಲೇ ಬಂಗಾರಪೇಟೆ ಪೊಲೀಸರು ಆಗಮಿಸಿ ನೊಂದ ಗಾಯಾಳುವಿನ ಹೇಳಿಕೆ ಪಡೆದು, ಪರಿಶಿಷ್ಟ ಜಾತಿ/ಪಂಗಡಗಳ ಮೇಲೆ ದೌರ್ಜನ್ಯ ಕಾಯ್ದೆ-೨೦೧೫ ಅಡಿ ಪ್ರಕರಣ ದಾಖಲಿಸಿದ್ದಾರೆ.

ಇತ್ತ ಅಟ್ರಾಸಿಟಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಆರೋಪಿಗಳ ಪ್ರತಿ ದೂರು ಸಹ ದಾಖಲಿಸಿದ್ದಾರೆ. ಅಟ್ರಾಸಿಟಿ ಪ್ರಕರಣದಲ್ಲಿ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಇನ್ನೋರ್ವ ತಲೆ ಮರೆಸಿಕೊಂಡಿದ್ದಾನೆ. ತನಿಖಾಧಿಕಾರಿ ಡಿ.ವೈ.ಎಸ್.ಪಿ. ಗ್ರಾಮಕ್ಕೆ ಬೇಟಿ ನೀಡಿ ಮಹಜರು ನಡೆಸಿದ್ದಾರೆ.

ದೊಡ್ಡವಲಗಮಾದಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ೯೦ ಮನೆಗಳು, ಮುಸ್ಲಿಂ-೭೦, ಒಕ್ಕಲಿಗ-೩೦, ಮರಾಠರು-೧೮, ರಜಪೂತರು-೧೩ ಮನೆಗಳು, ಭಜಂತ್ರಿ-೧೦, ಮಡಿವಾಳ-೧೫, ವಿಶ್ವಕರ್ಮ-೦೪, ನಾಯ್ಡು-೦೧ ಮತ್ತು ಬ್ಯಾಹ್ಮಣರು-೦೧ ಕುಟುಂಬ ಸೇರಿದಂತೆ ಸುಮಾರು ೨೦ ಸಮುದಾಯಗಳು ವಾಸವಿದ್ದು, ಗ್ರಾಮದ ಇತಿಹಾಸದಲ್ಲೇ ಇದೇ ಮೊದಲ ಜಾತಿ ದೌರ್ಜನ್ಯ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

…………………..

“ಘಟನೆ ನಡೆದು ಮೂರು ದಿನಗಳಾದರೂ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ, ತಹಶೀಲ್ದಾರ್, ಜಿಲ್ಲಾ ಜಂಟಿ ನಿರ್ದೇಶಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಯಾರೊಬ್ಬರೂ ಹಲ್ಲೆಗೊಳಗಾದ ಸಂತ್ರಸ್ತ ಮತ್ತು ಅವರ ಕುಟುಂಬ ವರ್ಗದವರನ್ನು ಬೇಟಿ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡದೆ, ಸಂತ್ರಸ್ತರಿಗೆ ಪರಿಹಾರವನ್ನೂ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಕನಿಷ್ಠ ಗ್ರಾಮದಲ್ಲಿ ಧೈರ್ಯ ತುಂಬುವ ಭರವಸೆಯ ಸಭೆಯನ್ನೂ ಸಹ ನಡೆಸಿಲ್ಲ, ತಾಲ್ಲೂಕು ಆಡಳಿತದ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅಕ್ಟೋಬರ್ ೨೫ರಂದು ದಲಿತ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಗೆ ಹಾಕಲಾಗುವುದು”

– ಸೂಲಿಕುಂಟೆ ರಮೇಶ್, ರಾಜ್ಯ ಸಂಘಟನಾ ಸಂಚಾಲಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮತ್ತು ಹೂವರಸನಹಳ್ಳಿ ರಾಜಪ್ಪ, ಪ್ರಧಾನ ಕಾರ್ಯದರ್ಶಿ, ಜನಾಧಿಕಾರ ಸಂಘಟನೆ. ( ಜಂಟಿ ಹೇಳಿಕೆ)

…………………

“ನಮ್ಮ ಗ್ರಾಮದಲ್ಲಿ ಸುಮಾರು ೨೦ ಸಮುದಾಯಗಳು ಇದ್ದು, ಎಲ್ಲಾ ಸಮುದಾಯಗಳು ಪರಸ್ಪರ ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸಿಕೊಂಡು ಬಂದಿದ್ದೇವೆ. ಗ್ರಾಮದ ಚರಿತ್ರಯಲ್ಲಿ ಇಲ್ಲಿಯ ತನಕ ಒಂದೇ ಒಂದು ಅಟ್ರಾಸಿಟಿ ಪ್ರಕರಣ ದಾಖಲಾಗಿಲ್ಲ, ಇದೇ  ಮೊದಲ ಬಾರಿಗೆ ಜಾತಿ ಹೆಸರಿನಲ್ಲಿ ಪ್ರಕರಣ ದಾಖಲಾಗಿರುವುದು ಗ್ರಾಮಸ್ಥರಿಗೆ ಹಾಗೂ ವೈಯಕ್ತಿಕವಾಗಿ ಮುಜಗರ ತಂದಿದೆ. ಗ್ರಾಮದಲ್ಲಿ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಮುಂದೆ ಈ ರೀತಿಯ ಘಟನೆಗಳಿಗೆ ಅವಕಾಶವಾಗದಂತೆ ಒಂದು ಭರವಸೆಯನ್ನು ಅಧಿಕಾರಿಗಳು ನೀಡಬೇಕು. ಇದರಿಂದ ಸಣ್ಣ ಸಣ್ಣ ಸಮುದಾಯಗಳಿಗೂ ಧೈರ್ಯ  ಬರುತ್ತದೆ”.

– ಅಲೀಂಖಾನ್, ಗ್ರಾಮ ಪಂಚಾಯ್ತಿ ಸದಸ್ಯರು, ದೊಡ್ಡವಲಗಮಾದಿ.

Related Post

ಸರ್ಕಾರದಿಂದ ಪರೀಕ್ಷೆ ವೇಳೆಯಲ್ಲಿ ಹಿಂದೂ ಮಹಿಳೆಯರ ಮಾಂಗಲ್ಯ-ಕಾಲುಂಗುರ ತೆಗೆಸುವ ದುಸ್ಸಾಹಸ: ಡಾ.ವೇಣುಗೋಪಾಲ್ ಆಕ್ರೋಶ
ಮೀಸಲಾತಿ ದುರುಪಯೋಗ ಸಾಭೀತಾದ ಹಿನ್ನಲೆ ಕೊತ್ತೂರು ಮಂಜುನಾಥ್ ಶಾಸಕ ಸ್ಥಾನ ರದ್ದು ಮಾಡುವಂತೆ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹ
ಐತಿಹಾಸಿಕ ೨೦೦ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಪಂಚರಾಜ್ಯಗಳ ಸಾಂಸ್ಕೃತಿಕ ಸಂಗಮಕ್ಕೆ  ಆದಿಮ ಸಜ್ಜು.

Leave a Reply

Your email address will not be published. Required fields are marked *

You missed

error: Content is protected !!